ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಬೇಕು ಎಂದು ಬಿಜೆಪಿ-ಜೆಡಿಎಸ್ ತೊಡೆ ತಟ್ಟಿವೆ. ಮತ್ತೊಂದೆಡೆ ಮುಡಾ ಕೇಸ್‌ನಿಂದಾಗಿ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ. ಈಗ ಸ್ವಪಕ್ಷದಿಂದಲೇ ಸರ್ಕಾರ ಬೀಳುವ ಬಗ್ಗೆ ಮಾತುಕೇಳಿಬಂದಿದೆ. ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಅವರು ಸರ್ಕಾರ ಬಿದ್ದರೆ ಬೀಳಲಿ, ರಾಜ್ಯದಲ್ಲಿ ಜಾತಿಗಣತಿ ಜಾರಿಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಜಾತಿ ಗಣತಿ ಜಾರಿ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿ.ಕೆ.ಹರಿಪ್ರಸಾದ್ ಅವರು ಜಾತಿಗಣತಿ ಜಾರಿಯಿಂದ ರಾಜ್ಯದ ಎಲ್ಲ ಸಮುದಾಯಗಳಿಗೆ ಒಳ್ಳೆಯದಾಗಲಿದೆ. ಆದರೆ ಜಾತಿಗಣತಿ ಜಾರಿಯಿಂದಲೇ ಸರ್ಕಾರ ಬೀಳುತ್ತದೆ ಎನ್ನುವುದಾದರೆ, ಹಾಗೆಯೇ ಆಗಲಿ ಬಿಡಿ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಜಾತಿಗಣತಿ ಜಾರಿ ಮಾಡುವ ಅಂಶವಿದೆ. ಹೀಗಿದ್ದರೂ ವರದಿ ಜಾರಿ ಮಾಡಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ? ವಿಳಂಬ ಮಾಡದೆ ಮೊದಲು ಜಾತಿಗಣತಿಯನ್ನು ರಾಜ್ಯದಲ್ಲಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.