ಬೆಳಗಾವಿ: ಮಳೆ ಮಧ್ಯೆಯೂ ನಗರದಲ್ಲಿ ಭಾನುವಾರ ಈದ್-ಮಿಲಾದ್ ಹಬ್ಬದ ಮೆರವಣಿಗೆ ಸಂಭ್ರಮದಿಂದ ನೆರವೇರಿತು. ಮುಸ್ಲಿಮರೊಂದಿಗೆ ಹಿಂದೂಗಳೂ ಭಾಗವಹಿಸಿ ಭಾವೈಕ್ಯತೆ ಮೆರೆದರು.
ನಗರದಲ್ಲಿ ಸೆ.16ರಂದೇ ಈದ್-ಮಿಲಾದ್ ಹಬ್ಬವನ್ನು ಮುಸ್ಲಿಮರು ಆಚರಿಸಿದ್ದಾರೆ. ಅಂದೇ ಬೆಳಿಗ್ಗೆ ಈದ್-ಮಿಲಾದ್ ಮೆರವಣಿಗೆ ನಡೆಯಬೇಕಿತ್ತು.
ಆದರೆ, ಅದರ ಮಾರನೇ ದಿನವೇ( ಸೆ.17) ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಇತ್ತು.
ಹಾಗಾಗಿ ಗಣೇಶನ ಮೆರವಣಿಗೆ ಮೊದಲು ಅದ್ದೂರಿಯಾಗಿ ನಡೆಯಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೂ ಅನುಕೂಲವಾಗಲೆಂದು ಮುಸ್ಲಿಮರು ಈದ್ ಮೆರವಣಿಗೆಯನ್ನು ಸೆ.22ಕ್ಕೆ ಮುಂದೂಡಿ ಸಾಮರಸ್ಯದ ಸಂದೇಶ ಸಾರಿದ್ದರು. ಹಾಗಾಗಿ ಭಾನುವಾರ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಅದ್ದೂರಿ ಮೆರವಣಿಗೆ: ಇಲ್ಲಿನ ಹಳೇ ಪಿ.ಬಿ. ರಸ್ತೆಯಿಂದ ಹೊರಟ ಮೆರವಣಿಗೆ, ಕೇಂದ್ರೀಯ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮನ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ ಮಾರ್ಗವಾಗಿ ಸಾಗಿ, ಕ್ಯಾಂಪ್ ಪ್ರದೇಶದಲ್ಲಿನ ಹಜರತ್ ಸೈಯದ್ ಅಸದ್‌ಖಾನ್ ದರ್ಗಾ ಆವರಣ ತಲುಪಿತು. ಅಲ್ಲದೆ, ನಗರದ ವಿವಿಧ ಬಡಾವಣೆಗಳಲ್ಲೂ ಪ್ರತ್ಯೇಕವಾಗಿ ಮೆರವಣಿಗೆ ನಡೆದವು.
ಮುಖ್ಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು, ಉತ್ಸಾಹದಿಂದ ಹೆಜ್ಜೆಹಾಕಿದರು. ಮಕ್ಕಳು, ಯುವಕರು ಸಾಂಪ್ರದಾಯಿಕ ದಿರಿಸಿನಲ್ಲಿ ಗಮನಸೆಲೆದರು. ಮೆರವಣಿಗೆಯುದ್ದಕ್ಕೂ ಇಸ್ಲಾಂ ಧರ್ಮದ ಧ್ವಜಗಳು ರಾರಾಜಿಸಿದವು.