ಬೆಂಗಳೂರು: ಅಭ್ಯರ್ಥಿಗಳಿಗೆ ಆಗುತ್ತಿದ್ದ ಅನನು ಕೂಲ ಮತ್ತು ಆ ಸಂಬಂಧ ನ್ಯಾಯಾ ಲಯದ ಸೂಚನೆ ಮೇರೆಗೆ ಸರಕಾರ ಕೊನೆಗೂ ಮತ್ತೂಮ್ಮೆ ಪಿಎಸ್‌ಐ ನೇಮಕಾತಿ ಪರೀಕ್ಷೆಯನ್ನು ಮುಂದೂಡಿದೆ.
ಇದರೊಂದಿಗೆ ಯುಪಿಎಸ್ಸಿ ಮುಖ್ಯ ಪರೀಕ್ಷೆ ಬರೆಯಲಿರುವ 102 ಅಭ್ಯರ್ಥಿಗಳು ನಿಟ್ಟುಸಿರು ಬಿಡು ವಂತಾಗಿದೆ.
ಸೂಕ್ತ ದಿನಾಂಕ ವನ್ನು ಒಂದೆರಡು ದಿನಗಳಲ್ಲಿ ಪ್ರಕ ಟಿಸ ಲಾಗುವುದು ಎಂದು ಗೃಹ ಸಚಿವ ಡಾ| ಪರಮೇಶ್ವರ್ ಹೇಳಿದ್ದಾರೆ.
402 ಪಿಎಸ್‌ಐಗಳ ನೇಮಕಾತಿಗಾಗಿ ಸೆ. 22ರಂದು ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿ ವೇಳಾಪಟ್ಟಿ ಯನ್ನೂ ಪ್ರಕಟಿಸಿತ್ತು.
ಆದರೆ ಅದೇ ದಿನ ಯುಪಿಎಸ್ಸಿ ಮುಖ್ಯ ಪರೀಕ್ಷೆ ನಡೆಯಲಿದೆ. ಪಿಎಸ್‌ಐ ನೇಮಕಾತಿಗೆ ಪರೀಕ್ಷೆ ಬರೆಯಲಿರುವ ರಾಜ್ಯದ 102 ಅಭ್ಯರ್ಥಿಗಳು ಕೂಡ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದರಿಂದ ನೂರಾರು ಜನ ಅವಕಾಶ ವಂಚಿತರಾಗಲಿದ್ದು, ಕೂಡಲೇ ಪರೀಕ್ಷೆ ಮುಂದೂಡುವಂತೆ ಒತ್ತಾಯ ಕೇಳಿಬಂದಿತ್ತು.
ಮಂಗಳವಾರವಷ್ಟೇ ಯುಪಿಎಸ್ಸಿ ಮುಖ್ಯ ಪರೀಕ್ಷೆ ಹಾಗೂ ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳ ನಿಯೋಗ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿ ಪರೀಕ್ಷೆ ಮುಂದೂಡಿಕೆಗೆ ಮನವಿ ಮಾಡಿತ್ತು. ಆಗ ಸಚಿವರು “ಕೆಇಎ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ’ ಹೇಳಿದ್ದರು.
ಬೆನ್ನಲ್ಲೇ ಸರಕಾರ ಗುರುವಾರ ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಂದೂಡಿರುವುದಾಗಿ ಸ್ಪಷ್ಟಪಡಿಸಿದೆ. ಈ ಮಧ್ಯೆ ಹಲವು ಬಾರಿ ನಾನಾ ಕಾರಣಗಳಿಂದ ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಂದೂಡಿಕೆಯಾಗಿದೆ. ಈಗ ಮತ್ತೆ ಮುಂದೂಡಿಕೆಯಾದರೆ ಮುಂದಿನ 6 ತಿಂಗಳು ಯಾವುದೇ ದಿನಾಂಕಗಳಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.