ಕಲಬುರಗಿ: ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಂದು ಉತ್ತಮ ಶಿಕ್ಷಕರ ಆಯ್ಕೆಯನ್ನು ಅಂತೀಮಗೊಳಿಸುವಲ್ಲಿ ರಾಜಕೀಯ ಪ್ರಹಸನ ನಡೆದಿರುವುದು ಇಡೀ ಶಿಕ್ಷಣ ಇಲಾಖೆ ತಲೆ ತಗ್ಗಿಸುವಂತಾಗಿದೆ.
ಡಿಡಿಪಿಐ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ತಾಲೂಕಿಗೆ ಇಬ್ಬರು ಶಿಕ್ಷಕರಂತೆ ಒಟ್ಟು 16 ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಾಲೂಕಿಗೆ ಒಬ್ಬರಂತೆ 8 ಉತ್ತಮ ಶಿಕ್ಷಕರೆಂದು ಪಟ್ಟಿ ಅಂತೀಮಗೊಳಿಸಿ ಸಿಇಓ ಅವರಿಗೆ ಸಲ್ಲಿಸಿ ಅನುಮತಿ ಪಡೆದು ಸಾರ್ವಜನಿಕ ಪ್ರಕಟಣೆಗಾಗಿ ವಾರ್ತಾ ಇಲಾಖೆ ಗೆ ಸಲ್ಲಿಸಲಾಗಿದೆ.
ಆದರೆ ತದನಂತರ ರಾಜಕೀಯ ಪ್ರಹಸನ ನಡೆದು ಒಬ್ಬರ ಹೆಸರನ್ನು ವಾಪಸ್ಸು ಪಡೆದು ತದನಂತರ ಪಟ್ಟಿ ಬದಲಾಯಿಸಿ ಎರಡನೇ ಬಾರಿಗೆ ಪ್ರಕಟಿಸಲಾಯಿತು.
ವೈದ್ಯಕೀಯ ಶಿಕ್ಷಣ ಸಚಿವರ ಆಕ್ಷೇಪ: ಸೇಡಂ ತಾಲೂಕಿನಿಂದ ಪ್ರಾಥಮಿಕ ಶಿಕ್ಷಕರ ವಿಭಾಗದಿಂದ ಚಂದ್ರಕಲಾ ಹಾಗೂ ಅನ್ನಪೂರ್ಣ ಎಸ್ ಬಾನರ್ ಅವರ ಹೆಸರನ್ನು ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಿದ್ದನ್ನು ಸೇಡಂ ಶಿಕ್ಷಕರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಗಮನಕ್ಕೆ ತಂದಿದ್ದಾರೆ. ಆಗ ಸಚಿವರು ಡಿಡಿಪಿಐ ಸೂರ್ಯಕಾಂತ ಮದಾನೆ ಅವರಿಗೆ ದೂರವಾಣಿ ಕರೆ ಮಾಡಿ, ಯಾವುದೇ ಕಾರಣಕ್ಕೂ ಅನ್ನಪೂರ್ಣ ಬಾನರ್ ಅವರಿಗೆ ಪ್ರಶಸ್ತಿ ನೀಡಬೇಡಿ. ಯಾವುದಾದರೂ ಕಾರಣ ಹೇಳಿ ವಾಪಸ್ಸು ಪಡೆಯಿರಿ ಎಂದಿದ್ದಾರೆ. ಇಲ್ಲ ಸರ್, ಪಟ್ಟಿ ಅಂತೀಮಗೊಳಿಸಲಾಗಿದೆ ಎಂದಿದ್ದರೂ, ಸಚಿವನಾಗಿ ಹೇಳ್ತಾ ಇದ್ದೀನಿ, ಹೇಳಿದ್ದನ್ನು ಕೇಳಿ ಎಂದಿದ್ದಾರೆ. ಒತ್ತಡಕ್ಕೆ ಸಿಲುಕಿದ ಡಿಡಿಪಿಐ ಸೂರ್ಯಕಾಂತ ಮದಾನೆ ಅವರು ವಾರ್ತಾ ಇಲಾಖೆಗೆ ನೀಡಲಾಗಿದ್ದ 16 ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ ವಾಪಸ್ಸು ಪಡೆದು 15 ಶಿಕ್ಷಕರ ಪಟ್ಟಿಯನ್ನೇ ಅಂದರೆ ಅನ್ನಪೂರ್ಣ ಬಾನರ್ ಅವರ ಹೆಸರು ಡಿಲೀಟ್ ಮಾಡಿ ಎರಡನೇ ಬಾರಿಗೆ ಪಟ್ಟಿಯನ್ನೇ ಅಂತಿಮ ಗೊಳಿಸಲಾಯಿತು.
ಬಿಜೆಪಿ ಆಕ್ರೋಶ – ಪ್ರತಿಭಟನೆ: ಅನ್ನಪೂರ್ಣ ಎಸ್ ಬಾನರ್ ಅವರ ಹೆಸರನ್ನು ಉತ್ತಮ ಶಿಕ್ಷಕಿ ಪ್ರಶಸ್ತಿ ಪಟ್ಟಿಯಿಂದ ಕೈ ಬಿಟ್ಟಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿತು.
ಶಾಸಕರಾದ ಬಸವರಾಜ ಮತ್ತಿಮಡು, ಶಶೀಲ್ ಜಿ. ನಮೋಶಿ, ಮಾಜಿ ಶಾಸಕ ರಾಜಕುಮಾರ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಕಲಬುರಗಿ ನಗರಾಧ್ಯಕ್ಷ ಚಂದು ಪಾಟೀಲ್ ಮುಂತಾದವರು, ಶಿಕ್ಷಕರ ಪ್ರಶಸ್ತಿ ಆಯ್ಕೆಯಲ್ಲಿ ರಾಜಕೀಯ ಏಕೆ? ಸಚಿವರ ಕೈಗೊಂಬೆಯಾಗಿ ಸೇಡಂ ತಾಲೂಕಿನ ಶಿಕ್ಷಕಿಯನ್ನು ಕೈ ಬಿಟ್ಟು ಅನ್ಯಾಯ ಹಾಗೂ ಮೋಸ ಎಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಮಾತನಾಡಿ, ಸೇಡಂ ತಾಲೂಕಿನಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ಯನ್ನು ಅಂತೀಮಗೊಳಿಸಿ ವಾರ್ತಾ ಇಲಾಖೆಗೆ ಸುದ್ದಿಯಾಗಿ ಪ್ರಕಟಿಸಲು ನೀಡಿ ತದನಂತರ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಫೋನ್ ಮಾಡಿದ ನಂತರ ಉತ್ತಮ ಶಿಕ್ಷಕಿಯ ಹೆಸರನ್ನು ಕೈ ಬಿಡಲಾಗಿದೆ. ಡಿಡಿಪಿಐ ಕಚೇರಿ ಕಾಂಗ್ರೆಸ್ ಕಚೇರಿನಾ? ತಮ್ಮ ರೀತಿ ಸರಿಯಾದುದ್ದಲ್ಲ. ಪ್ರಶಸ್ತಿ ವಾಪಸ್ಸು ಪಡೆದಿದ್ದರಿಂದ ಮನನೊಂದಿರುವ ಶಿಕ್ಷಕಿ ಜೀವಕ್ಕೆ ಏನಾದರೂ ಮಾಡಿಕೊಂಡರೆ ಜವಾಬ್ದಾರಿ ಯಾರು? ಮೊದಲಿನ ಪಟ್ಟಿ ಯನ್ನೇ ಅಂತೀಮಗೊಳಿಸಿ ನಾಳೆ ಸನ್ಮಾನಿಸದಿದ್ದರೆ ಬಿಜೆಪಿ ಕಾರ್ಯಕ್ರಮ ನಡೆಸಲು ಬಿಡೋದಿಲ್ಲ. ಅಹೋ ರಾತ್ರಿ ಡಿಡಿಪಿಐ ಕಚೇರಿಯಲ್ಲೇ ಧರಣಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತದನಂತರ ಡಿಡಿಪಿಐ ಅವರು, ಎಲ್ಲವನ್ನು ಪರಿಶೀಲಿಸಿ ಉತ್ತಮ ಶಿಕ್ಷಕರನ್ನು ಅಂತೀಮಗೊಳಿಸಲಾಗಿದೆ. ಆದರೆ ಸಚಿವರ ಒತ್ತಡದ ಮೇರೆಗೆ ಹೆಸರೊಂದನ್ನು ಅಮಾನತ್ತಿನಲ್ಲಿಡಲಾಗಿತ್ತು. ಈಗ ಮರು ಸೇರ್ಪಡೆಗೊಳಿಸಿ ನಾಳೆ ಸನ್ಮಾನಿಸಲಾಗುವುದು ಎಂದು ಅಧಿಕೃತವಾಗಿ ಪ್ರಕಟಿಸುವ ಮುಖಾಂತರ ಪ್ರಹಸನಕ್ಕೆ ತೆರೆ ಎಳೆದರು.