ಹಾವೇರಿ (ಶಿಗ್ಗಾವಿ): ಇನ್ನು ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ. ಆ ರೀತಿಯ ರಾಜಕೀಯ ಪರಿಸ್ಥಿತಿ ರಾಜ್ಯದಲ್ಲಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಏರ್ಪಡಿಸಿದ ಸದಸ್ಯತಾ ಅಭಿಯಾನದಲ್ಲಿ ಪಾಲ್ಗೊಂಡು ಅಭಿಯಾನಕ್ಕೆ ಚಾಲನೆ ಕೊಟ್ಟು ಮಾತನಾಡಿದರು.
ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ನಾವಿದ್ದಾಗ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುತ್ತಿದ್ದೆವು ಅದನ್ನು ನಿಲ್ಲಿಸಿದರು. ಡಿಸೆಲ್ ಸಬ್ಸಿಡಿ ಕೊಡುತ್ತಿದ್ದೇವು ಅದನ್ನು ನಿಲ್ಲಿಸಿದರು. ಇದು ರೈತರು ಹಾಗೂ ವಿದ್ಯಾರ್ಥಿಗಳ ವಿರೋಧಿ ಸರ್ಕಾರ ಗ್ಯಾರೆಂಟಿಯಿಂದ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಜಾಗ ಇಲ್ಲದಂತಾಗಿದೆ. ಹಣಕಾಸಿನ ದಿವಾಳಿತನಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿ ಮುಂದುವರೆದರೆ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗನವಾಡಿ ಕಾರ್ಯಕರ್ತರ ವೇತನ ನಿಲ್ಲುತ್ತದೆ. ನಾವು ಒಂದು ಭವಿಷ್ಯ ಹೇಳುತ್ತೇನೆ. ನಾವು ದೊಡ್ಡ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಮಾಡಬೇಕು. ರೈತರು, ಮಹಿಳೆಯರು, ಯುವಕರನ್ನು ಬೂತ್ ಮಟ್ಟದಲ್ಲಿ ಸದಸ್ಯರನ್ನಾಗಿ ಮಾಡಬೇಕು. ನಂತರ ದೊಡ್ಡ ಸಮಾವೇಶ ಮಾಡೋಣ, ಬರುವ ನವೆಂಬರ್‌ನಲ್ಲಿ ಉಪ ಚುನಾವಣೆ ಬರಲಿದ್ದು ಅದಕ್ಕೂ ಮುನ್ನ ಸದಸ್ಯತ್ವ ಅಭಿಯಾನ ಯಶಸ್ವಿಯಾಗಬೇಕು. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ನಾವು ಜಯಭೇರಿ ಬಾರಿಸಬೇಕು ಎಂದು ಹೇಳಿದರು.