ಸವದತ್ತಿ: ಇಂಚಲ ಪಿಡಿಒ, ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಅವಾಚ್ಯವಾಗಿ ಬೈದು, ನಿಂದಿಸಿದ್ದನ್ನು ಖಂಡಿಸಿ ಶಿಸ್ತುಕ್ರಮಕ್ಕೆ ಆಗ್ರಹಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ಪ್ರತಿಭಟಿಸಿ ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಿದರು.
ಮುಖ್ಯ ವೈದ್ಯಾಧಿಕಾರಿ ಎಚ್.ಎಂ. ಮಲ್ಲನಗೌಡರ ಮಾತನಾಡಿ, ‘ಇಂಚಲ ಗ್ರಾಮದ ಪಿಎಚ್‌ಸಿಯಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದ್ದು, ಪರ್ಯಾಯವಾಗಿ ಚಚಡಿಯ ಪಿಎಚ್‌ಸಿಯ ಡಾ.ವಿಶಾಲು ಗದಗ ಮತ್ತು ಡಾ. ನಾಗರಾಜಗೌಡ ಮಾಳಿಪಾಟೀಲರನ್ನು ಹೆಚ್ಚುವರಿಯಾಗಿ ನೇಮಿಸಲಾಗಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಇಲಾಖೆಯಿಂದ ಅಗತ್ಯ ಮತ್ತು ತ್ವರಿತ ಕ್ರಮ ಜರುಗಿಸಲಾಗಿದೆ. ಆದಾಗ್ಯೂ ಪಿಡಿಒ ಮಲ್ಲಪ್ಪ ಹಾರೋಗೊಪ್ಪ ಇವರು ಟಿಎಚ್‌ಒ ಶ್ರೀಪಾದ ಸಬನೀಸ್ ಅವರಿಗೆ ದೂರವಾಣಿ ಕರೆ ಮಾಡಿದ್ದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ’ ಎಂದು ಆರೋಪಿಸಿದರು.
‘ತಾಲ್ಲೂಕು ಪಂಚಾಯ್ತಿ ಇಒ ಜೊತೆ ಚರ್ಚಿಸಿ ಸರಿಪಡಿಸಲಾಗುವುದೆಂದು ತಿಳಿಸಿದರೂ ನಿಂದನೆ ಮುಂದುವರಿಸಿ, ಮೇಲಾಧಿಕಾರಿಗಳಿಗೂ ತಿಳಿಸಿರಿ; ಮುಂದಿನ ಪರಿಣಾಮ ಎದುರಿಸುತ್ತೇನೆಂದು ಉದ್ಘಟತನ ತೋರಿದ್ದಾರೆ’ ಎಂದು ಹೇಳಿದರು.
‘ಜವಾಬ್ದಾರಿಯುತ ಸ್ಥಾನದಲ್ಲಿರುವ ತಾಲ್ಲೂಕು ಆರೋಗ್ಯ ಅಧಿಕಾರಿಯೊಂದಿಗೆ ಏಕವಚನದ ಅವಾಚ್ಯ ಪದ ಬಳಕೆ ಖಂಡನೀಯ. ಇದು ವೈಯಕ್ತಿಕ ಹಾಗೂ ಇಲಾಖೆಯ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಕೂಡಲೇ ಪಿಡಿಒ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.