ಧಾರವಾಡ: ರಾಜ್ಯ ಸರಕಾರ ಜಿಂದಾಲ್‌ಗೆ ಅನುಕೂಲ ಮಾಡಿ ಜಾಗ ಕೊಡುತ್ತಿಲ್ಲ. 90 ಸಾವಿರ ಕೋಟಿ ರೂ.ಗಳನ್ನು ಜಿಂದಾಲ್ ಇಲ್ಲಿ ಹೂಡಿಕೆ ಮಾಡಿದೆ. ಯಾವುದೇ ಒಂದು ಸಂಸ್ಥೆಗೆ ಲೀಸ್ ಕೊಟ್ಟಾಗ ಕಾನೂನು ಪ್ರಕಾರ ಷರತ್ತು ಇರುತ್ತದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಜಿಂದಾಲ್‌ಗೆ ಭೂಮಿ ಕೊಡುತ್ತಿರುವುದನ್ನು ವಿರೋಧಿಸುತ್ತಿರುವ ಶಾಸಕ ಅರವಿಂದ ಬೆಲ್ಲದ ಅವರ ಕುರಿತು ಸುದ್ದಿಗಾರರುಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಲಾಡ್, ಬೆಲ್ಲದ್ ಕೈಗಾರಿಕೆ ಹೊಂದಿದವರು.
ಕೆಐಎಡಿಬಿ ಜಾಗವನ್ನು ಅವರು ಲೀಸ್ ಮೇಲೆ ತೆಗೆದುಕೊಂಡಿದ್ದಾರೆ. ಅದು ಕೂಡ ಒಂದು ಆಕ್ಟನಲ್ಲಿ ಬರುತ್ತದೆ. ಅವರು ಸಂಪೂರ್ಣ ದುಡ್ಡು ಕೊಟ್ಟಿರುತ್ತಾರೆ. ಆದರೆ ಷರತ್ತು ಮಾಡಿ ಅವರಿಗೆ ಭೂಮಿ ಕೊಡಲಾಗುತ್ತದೆ. ಈ ಬಗ್ಗೆ ಬೆಲ್ಲದ್ ಅವರಿಗೆ ಬೇರೆ ಅಭಿಪ್ರಾಯ ಇರಬಹುದು. ಕೇಂದ್ರ ಸರಕಾರ ಅವರದ್ದೇ ಇದೆ. ಯಾರಿಗೆ ಎಷ್ಟು ಭೂಮಿ ಕೊಟ್ಟಿದ್ದಾರೆ ಎಂಬುದನ್ನು ಅವರೇ ಹೇಳಲಿ ಎಂದರು.
ಕೈ ಶಾಸಕನಿಗೆ ಬಿಜೆಪಿ 100 ಕೋಟಿ ರೂ. ಆಫರ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಲಾಡ್, ಬಿಜೆಪಿಯವರು ಈಗ ರಾಜ್ಯಪಾಲರ ಮೂಲಕ ಸರಕಾರ ಬೀಳಿಸಲು ನೋಡುತ್ತಿದ್ದಾರೆ. ಅದಾನಿ, ಅಂಬಾನಿ ದುಡ್ಡು ಇದ್ದವರು ಏನು ಬೇಕಾದರೂ ಮಾಡಬಹುದು. ಬಿಜೆಪಿಗೆ ಅನುದಾನ ಅವರೇ ಮಾಡುತ್ತಾರೆ. ಹೀಗಾಗಿ ಅವರ ಬಳಿ ಸಾಕಷ್ಟು ದುಡ್ಡಿದೆ. ಇಲ್ಲಿಯವರೆಗೆ ಎಷ್ಟು ಸರಕಾರ ಬೀಳಿಸಿದ್ದಾರೆ ಎಂಬುದಾಗಿ ಬೆಲ್ಲದ ಅವರೇ ಹೇಳಲಿ. ಮೋದಿ ಸರಕಾರ ಬಂದ ಮೇಲೆ ಅಷ್ಟು ಯಶಸ್ವಿಯಾಗಿ ಸರಕಾರ ಬೀಳಿಸಿದ್ದಾರೆ ಎಂಬುದನ್ನು ಹೇಳಲಿ ಎಂದರು.