Breaking News

ಮಣ್ಣಿನ ಗಣಪನ ನಾನಾ ರೂಪ ಸಿದ್ಧ

Spread the love

ಹುಬ್ಬಳ್ಳಿ: ಗಣೇಶನ ಹಬ್ಬಕ್ಕೆ ದಿನಗಣನೆ ಶುರುವಾಗಿರುವಂತೆಯೇ ನಗರದಲ್ಲಿ ಕಲಾವಿದರು ಮಣ್ಣಿನ ಗಣೇಶ ಮೂರ್ತಿಗಳಿಗೆ ಅಂತಿಮ ರೂಪ, ಬಣ್ಣ ನೀಡುತ್ತಿದ್ದಾರೆ.

ಹುಬ್ಬಳ್ಳಿ ಗಣೇಶೋತ್ಸವಕ್ಕೆ ಅದರದ್ದೇ ಆದ ವಿಶೇಷತೆ ಇದೆ. 3-4 ತಲೆಮಾರುಗಳಿಂದ ಮಣ್ಣಿನ ಗಣಪತಿಗಳನ್ನು ತಯಾರಿಸುವ ಹಲವು ಕುಟುಂಬಗಳು ಇಲ್ಲಿವೆ.

ಹೊಸೂರು 2ನೇ ಕ್ರಾಸ್‌, ಬಮ್ಮಾಪುರ ಓಣಿ, ಹಳೇಹುಬ್ಬಳ್ಳಿಯ ಅರವಿಂದ ನಗರ ಹಾಗೂ ಮರಾಠ ಗಲ್ಲಿಗಳಲ್ಲಿ ಈಗ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಕುಟುಂಬಗಳು ಹಗಲು ರಾತ್ರಿ ಕಾರ್ಯ ನಿರತವಾಗಿವೆ.

ಹೊಸೂರು- 2ನೇ ಕ್ರಾಸ್‌ನಲ್ಲಿ 8-10 ಕುಟುಂಬಗಳು ಗಣೇಶನನ್ನು ತಯಾರಿಸುವ ಪರಂಪರೆ ಮುಂದುವರಿಸಿವೆ. ವರ್ಷಕ್ಕೆ 500 ಮೂರ್ತಿಗಳನ್ನು ತಯಾರಿಸುವ ಗಣೇಶ ಪೋಣಾರಕರ ಅವರ ಮನೆತನದಲ್ಲಿ 3-4 ತಲೆಮಾರಿನಿಂದ ಈ ಸಂಪ್ರದಾಯ ಮುಂದುವರಿದು ಬಂದಿದೆ. ಪತ್ನಿ, ಮಕ್ಕಳು, ಸೊಸೆ, ಮೊಮ್ಮಕ್ಕಳು ಸಹ ವಿನಾಯಕನ ರೂಪುಗೊಳಿಸಲು ಕೈಜೋಡಿಸುತ್ತಾರೆ. ಯುಗಾದಿಯಲ್ಲೇ ಮಣ್ಣು ತಂದು ಪೂಜೆ ಮಾಡಿ ಮೂರ್ತಿ ಮಾಡುವುದಕ್ಕೆ ಶುರು ಮಾಡುತ್ತಾರೆ. ಹಬ್ಬಕ್ಕೆ ಒಂದು ತಿಂಗಳು ಇದೆ ಎನ್ನುವಾಗ ಬಣ್ಣ ಹಚ್ಚುವುದು ಹಾಗೂ ಅಂತಿಮ ಸ್ಪರ್ಶದ ಕಾರ್ಯ ನಡೆಯುತ್ತದೆ.

ಇಲ್ಲಿ 6 ಇಂಚಿನಿಂದ 6 ಅಡಿಗಳಷ್ಟು ಎತ್ತರದವರೆಗಿನ ಮೂರ್ತಿಗಳು ಇವೆ. ಮುದ್ದೆ ಗಣಪಗಳನ್ನೂ ಜನ ಕೇಳಿ ಮಾಡಿಸಿಕೊಳ್ಳುತ್ತಾರೆ. ನಂದಿ ವಾಹನ, ಸಿಂಹವಾಹನ, ಪುಷ್ಪವಾಹನ, ಎಲೆ ವಾಹನ, ನವಿಲು ವಾಹನ, ಚಂದ್ರನ ಮೇಲೆ ಆಸೀನ, ಚಂದನ ಲೇಪಿತ, ಸಿಂಹಾಸನಾರೂಢ, ಸಾಯಿಬಾಬಾ ಗಣೇಶ, ಇಡಗುಂಜಿ ಗಣೇಶ, ಕೃಷ್ಣರೂಪಿ ಗಣಪ, ಬಾಲಗಣಪ… ಹೀಗೆ ಹಲವು ವೈವಿಧ್ಯ ರೂಪಗಳಲ್ಲಿ ಗಣನಾಯಕ ಮೈದಳೆದಿದ್ದಾನೆ. ಪರಿಸರಸ್ನೇಹಿ ಗಣೇಶನಿಗೂ ಸಾಕಷ್ಟು ಬೇಡಿಕೆ ಇದೆ. ದರ ₹ 500ರಿಂದ ಆರಂಭಿಸಿ ₹ 20 ಸಾವಿರದವರೆಗೂ ಇದೆ.

‘ಅಂಚಟಗೇರಿಯ ಕೆರೆಯಿಂದ 2 ಟ್ರ್ಯಾಕ್ಟರ್‌ಗಳಷ್ಟು ಮಣ್ಣು ತರಿಸುತ್ತೇವೆ. ಈಗ ಮೊದಲಿನಷ್ಟು ಉತ್ತಮ ಚಿಕಣಿ ಮಣ್ಣು ದೊರೆಯುತ್ತಿಲ್ಲ. ಹೀಗಾಗಿ ಅದನ್ನು ಹದ ಮಾಡಿಕೊಳ್ಳಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ಈ ಬಾರಿ ಮಳೆ ಹೆಚ್ಚಾದ ಕಾರಣ ಮೂರ್ತಿ ಮಾಡುವ ಕಾರ್ಯ ಸ್ವಲ್ಪ ಹಿಂದೆ ಬಿತ್ತು’ ಎಂದು ಗಣೇಶ ಪೋಣಾರಕರ ವಿವರಿಸಿದರು.

ಕೆಂಪು ಮೂರ್ತಿ ವಿಶೇಷ: ಮೂರ್ನಾಲ್ಕು ತಲೆಮಾರಿನಿಂದ ಕೆಂಪು ಬಣ್ಣದ ಗಣೇಶ ಮೂರ್ತಿ ತಯಾರಿಸುವುದು ಬಮ್ಮಾಪುರ ಓಣಿಯ ಗೋಪಾಲ ಹೊಂಬಳ ಹಾಗೂ ವೈಷ್ಣವಿ ಹೊಂಬಳ ದಂಪತಿಯ ವಿಶೇಷ. ನಗರದ ಕೆಲವು ಮನೆತನಗಳಲ್ಲಿ ಕೆಂಪು ಗಣೇಶನನ್ನೇ ಇಟ್ಟು ಪೂಜಿಸುವುದು ಸಂಪ್ರದಾಯ. ವರ್ಷಕ್ಕೆ 350ರಷ್ಟು ಇಂಥದ್ದೇ ಮೂರ್ತಿಗಳನ್ನು ಇವರು ತಯಾರಿಸುತ್ತಾರೆ. ಶಿಗ್ಗಾವಿ ತಾಲ್ಲೂಕಿನ ಕೆರೆಯಿಂದ ಬೇಸಿಗೆಯ ಸಮಯದಲ್ಲಿ 1 ಟ್ರ್ಯಾಕ್ಟರ್‌ನಷ್ಟು ಮಣ್ಣು ತರಿಸುತ್ತಾರೆ.

ಬಮ್ಮಾಪುರ ಓಣಿಯಲ್ಲಿಯೂ 10-15 ಕುಟುಂಬಗಳು ಮಣ್ಣಿನ ಮೂರ್ತಿಗಳನ್ನು ತಯಾರಿಸುವ ‍ಪರಂಪರೆಯನ್ನು ಮುಂದುವರಿಸಿವೆ. ಮಣ್ಣಿನ ಗಣಪತಿಗಳಿಗೆ ಬೇಡಿಕೆ ಕಡಿಮೆ ಆಗದಿದ್ದರೂ, ಮೂರ್ತಿ ತಯಾರಿಸುವ ಕೆಲಸ ಶ್ರಮದಾಯಕವಾಗಿರುವುದರಿಂದ ಕ್ರಮೇಣ ಈ ಪರಂಪರೆ ಮುಂದುವರಿಸುವವರ ಸಂಖ್ಯೆ ಕಡಿಮೆ ಆಗಿದೆ.

ಹಳೇಹುಬ್ಬಳ್ಳಿಯ ಅರವಿಂದ ನಗರ ದಾಳಿಂಬರ ಪೇಟದ ಕಾಲಭೈರವೇಶ್ವರ ದೇವಸ್ಥಾನದ ಸಮೀಪ ಮಚ್ಛೇಂದ್ರನಾಥ ಹಣಗಿ ಕಳೆದ 30 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ. ವರ್ಷಕ್ಕೆ 500-600ರಷ್ಟು ಗಣಪಗಳನ್ನು ಇವರು ತಮ್ಮ ಕುಟುಂಬದವರ ಸಹಕಾರದೊಂದಿಗೆ ಸಿದ್ಧಪಡಿಸುತ್ತಾರೆ. 1 ಅಡಿಯಿಂದ 5 ಅಡಿಗಳಷ್ಟು ಎತ್ತರದ ವೈವಿಧ್ಯಮಯ ವಕ್ರತುಂಡನ ರೂಪಗಳು ಇಲ್ಲಿ ಕಾಣಸಿಗುತ್ತವೆ.

ಮರಾಠ ಗಲ್ಲಿ ಹಾಗೂ ನಗರದ ಇತರ ಕೆಲವು ಬಡಾವಣೆಗಳಲ್ಲೂ ಅಲ್ಲಲ್ಲಿ ಗಣೇಶ ಮೂರ್ತಿಗಳನ್ನು ಮನೆಯಲ್ಲೇ ತಯಾರಿಸಲಾಗುತ್ತದೆ. ಹೊರ ಊರುಗಳಿಂದ ಮೂರ್ತಿ ತರಿಸಿ ಇಲ್ಲಿ ಮಾರಾಟ ಮಾಡುವ ಉದ್ಯಮ ವರ್ಷವರ್ಷವೂ ಬೆಳೆಯುತ್ತಿರುವ ಬಗ್ಗೆ ಸ್ಥಳೀಯ ಮೂರ್ತಿ ಕಲಾವಿದರು ಆತಂಕ ವ್ಯಕ್ತಡಿಸಿದ್ದಾರೆ. ಪಿಒಪಿ ಮೂರ್ತಿಗಳಿಗೆ ನಿಷೇಧವಿದ್ದರೂ, ಅದು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೆ ಎಂಬ ಬಗ್ಗೆಯೂ ಶಂಕೆ ವ್ಯಕ್ತ ಪಡಿಸಿದ್ದಾರೆ.


Spread the love

About Laxminews 24x7

Check Also

ಪುರುಷರಿಗೆ ಸಾರಿಗೆ ಬಸ್ ಗಳಲ್ಲಿ ‘ಉಚಿತ ಪ್ರಯಾಣ’ ಪ್ರಸ್ತಾವನೆ ಸದ್ಯಕ್ಕೆ ಇಲ್ಲ : ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

Spread the love ಹುಬ್ಬಳ್ಳಿ : ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಕ್ಕಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ