ಬೆಂಗಳೂರು: ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಮುಂಜಾನೆ ನೂತನ ಕೆಪಿಸಿಸಿ ಆಡಿಟೋರಿಯಂನಲ್ಲಿ ವಿಶೇಷ ಹೋಮ-ಹವನ ನೆರವೇರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿರೋ ಹಿನ್ನೆಲೆಯಲ್ಲಿ ಮುಂದೆ ಯಾವುದೇ ವಿಘ್ನಗಳು ಎದುರಾಗದಂತೆ ಜ್ಯೋತಿಷಿ ಡಾ. ನಾಗರಾಜ್ ಆರಾಧ್ಯ ಹಾಗೂ ಅರ್ಚಕ ಮಹಂತೇಶ್ ಭಟ್ ನೇತೃತ್ವದಲ್ಲಿ ಹೋಮ ನಡೆಸಲಾಗಿದೆ.
ಹೋಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭಾಗಿಯಾಗಿದ್ದರು. ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಜ್ಞ ಹೋಮ, ಭೂವರಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮಿ ಹೋಮ, ಗಾಯಿತ್ರಿ ಹೋಮ ನಂತರ ಪೂರ್ಣಾಹುತಿ ಮಹಾಮಂಗಳಾರತಿ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಎಲ್ಲಾ ವಿಘ್ನಗಳ ನಿವಾರಣೆಗಾಗಿ ಹೋಮ ಮಾಡಿಸಲಾಗಿದೆ. ಶುಭ ಮೂಹೂರ್ತದಲ್ಲಿ ಪೂಜೆ ಮಾಡಿದ್ದೇವೆ. ಎರಡು ವರ್ಷಗಳಿಂದ ನೂತನ ಕಚೇರಿಯ ಕಟ್ಟಡದ ಕೆಲಸ ಸ್ಥಗಿತವಾಗಿತ್ತು. ಇದು ಎಲ್ಲರ ಒಳಿತಿಗಾಗಿ ಮಾಡುತ್ತಿರುವ ಹೋಮ ಎಂದರು.
ರಾಜ್ಯಕ್ಕೆ, ನಮ್ಮ ನಾಯಕರು ಹಾಗೂ ಕಾರ್ಯಕರ್ತರಿಗೆ ಒಳ್ಳೆಯದಾಗಲಿ. ರಾಜ್ಯ ಆದಷ್ಟು ಬೇಗ ಕೊರೊನಾದಿಂದ ಮುಕ್ತವಾಗಲಿ ಎಂಬ ಉದ್ದೇಶದಿಂದ ಈ ಹೋಮವನ್ನ ಮಾಡುತ್ತಿದ್ದೇವೆ ಎಂದು ಹೇಳಿದ್ರು. ಸದ್ಯದಲ್ಲೇ ಪದಗ್ರಹಣದ ದಿನಾಂಕ ನಿಗದಿ ಮಾಡುತ್ತೇವೆ. ಇಂದು ಸಿದ್ದರಾಮಯ್ಯ ಭೇಟಿಯಾಗಿ ಈ ಬಗ್ಗೆ ಚರ್ಚಿಸುತ್ತೇನೆ ಎಂದರು.
