ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡಾ ಪಾಟೀಲ ಯತ್ನಾಳ್, ರಾಜೀವ್ ಯಡ್ಡಿಯೂರಪ್ಪ ಶಿಷ್ಯನೋ, ವಿಜಯೇಂದ್ರ ಶಿಷ್ಯನೋ ಯಾರೆಂದು ಹೇಳಬೇಕು. ಮುಡಾ ಹಗರಣ ರಾಜೀವ್ ಬಿಜೆಪಿಯಲ್ಲೇ ಇದ್ದಾಗ ನಡೆದ ವಿಚಾರ. ಈಗ ಅವನು ಕಾಂಗ್ರೆಸ್ ಸೇರಿದ್ದಾನೆ ಎಂದು ಸ್ವಪಕ್ಷದವರ ವಿರುದ್ಧವೇ ಹೊಸ ಬಾಂಬ್ ಸಿಡಿಸಿದಿದ್ದಾರೆ.
ವಿಜಯಪುರ, ಜುಲೈ 28: ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್(HV Rajeeva)ಬಿಜೆಪಿಯಲ್ಲೆ ಇದ್ದಾಗ ಆದ ಹಗರಣ ನಡೆದಿದೆ. ಈಗ ಅವರು ಕಾಂಗ್ರೆಸ್ ಸೇರಿದ್ದಾನೆ. ಕಾಂಗ್ರೆಸ್ಗೆ ಯಾಕೆ ಸೇರಿದ್ದಾರೆ ಅಂದರೆ ಇದೆಲ್ಲ ಮುಚ್ಚಿ ಹಾಕಲು ಸೇರಿದ್ದಾರೆ ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೆಡವಲು ಸಿದ್ಧರಾಮಯ್ಯ ನೇತೃತ್ವದಲ್ಲಿ ಸೇರಿದ್ದಾರೆ. ರಾಜೀವ ಯಾರ ನಿರ್ದೇಶನದ ಮೇಲೆ ಕಾಂಗ್ರೆಸ್ ಸೇರಿದ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.
ರಾಜೀವ ಯಾರ ಶಿಷ್ಯ ಅನ್ನೋದು ಎಲ್ಲರಿಗೂ ಗೊತ್ತಿದೆ. ವಿಧಾನಸೌಧದಲ್ಲಿ ನಾನು ಹೇಳಿದ್ದೇನೆ. ಕೇವಲ ಸಿದ್ಧರಾಮಯ್ಯ ಅವರನ್ನ ಮಾತ್ರ ಗುರಿ ಮಾಡಬೇಡಿ. ಇವತ್ತು ನಮ್ಮ ವಿಜಯೇಂದ್ರ ಹೇಳುತ್ತಾರೆ, ಇದು ಕೇವಲ ಸಿದ್ಧರಾಮಯ್ಯ ವಿರುದ್ದ ಹೋರಾಟ ಅಲ್ಲ, ಕಾಂಗ್ರೆಸ್ ವಿರುದ್ಧ ಹೋರಾಟ ಅಂತ, ಹಾಗಾದ್ರೆ ಸಿದ್ಧರಾಮಯ್ಯ ಯಾರು? ಬೇರೆನಾ, ಬಿಜೆಪಿಯವರಾ? ಎಂದು ಪ್ರಶ್ನಿಸಿದ್ದಾರೆ.