ರಾಣೆಬೆನ್ನೂರು: ‘ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ಬೆಳೆಗಳಿಗೆ ಮೇಲು ಗೊಬ್ಬರವಾಗಿ ನೀಡಲು ಯೂರಿಯಾ ಗೊಬ್ಬರ ಅತ್ಯವಶ್ಯ. ಸರ್ಕಾರ ಯೂರಿಯಾ ಗೊಬ್ಬರ ಪೂರೈಸಲು ಮುಂಜಾಗ್ರತಾ ಕ್ರಮ ಕೈಗೊಂಡರೂ ನಗರದ ಆಗ್ರೋ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿದ ದರ ₹266 ಇದ್ದರೂ, ವ್ಯಾಪಾರಸ್ಥರು ₹ 300 ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಈ ಬಗ್ಗೆ ದೂರು ನೀಡಿದರೂ ಕೃಷಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲ’ ಎಂದು ತಾಲ್ಲೂಕಿನ ಹುಲ್ಲತ್ತಿ ಗ್ರಾಮದ ಜಗದೀಶ ಕೆರೂಡಿ ಆರೋಪಿಸಿದ್ದಾರೆ.
‘ಬೆಳೆಗಳಿಗೆ ಯೂರಿಯಾ ಗೊಬ್ಬರವನ್ನು ಪೂರೈಕೆ ಮಾಡದಿದ್ದಲ್ಲಿ ಬೆಳೆಗಳು ವಿಪರೀತ ಶೀತದಿಂದ ಕಂದು ಬಣ್ಣಕ್ಕೆ ತಿರುಗಿ ಬೆಳೆ ಪ್ರಮಾಣ ಕುಂಠಿತವಾಗುತ್ತದೆ ಎಂದು ರೈತರು ಯೂರಿಯಾ ಗೊಬ್ಬರ ಖರೀದಿಸಲು ಮುಂದಾಗಿದ್ದಾರೆ. ಆದರೆ ಕೆಲವು ವ್ಯಾಪಾರಸ್ಥರು ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ ಯಾವುದಾದರೂ ಎರಡು ಗಟ್ಟಿ ಗೊಬ್ಬರವನ್ನು ಖರೀದಿಸಿದರೆ ಮಾತ್ರ ಯೂರಿಯಾ ಗೊಬ್ಬರ ಕೊಡುತ್ತೇವೆ ಎಂದು ಒತ್ತಾಯಿಸುತ್ತಿದ್ದಾರೆ’ ಎಂದರು.