ಹುಬ್ಬಳ್ಳಿ: ‘ಕೇಂದ್ರ ಸರ್ಕಾರವು ಮಹದಾಯಿ ಯೋಜನೆಯನ್ನು ಶೀಘ್ರ ಜಾರಿಗೊಳಿಸಬೇಕು ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು’ ಎಂದು ರೈತ ಹೋರಾಟಗಾರ ವೀರೇಶ ಸೊಬರದಮಠ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರಧಾನಮಂತ್ರಿ, ರಾಷ್ಟ್ರಪತಿ, ವಿರೋಧ ಪಕ್ಷದ ನಾಯಕರ ಕಚೇರಿಗೆ, ರಾಜ್ಯದ 28 ಸಂಸದರಿಗೆ ಹಾಗೂ ದೆಹಲಿಯಲ್ಲಿ ಈಚೆಗೆ ಮನವಿ ಸಲ್ಲಿಸಲಾಗಿದೆ.
ಈ ಯೋಜನೆ ಜಾರಿಗೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗಿರುವುದರಿಂದ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮನವಿಪತ್ರ ನೀಡಲಾಗಿದೆ. ಅವರ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.
‘ಕಳಸಾ ನಾಲೆಯಿಂದ 1.72 ಟಿ.ಎಂ.ಸಿ ನೀರು ಪಡೆಯಲು ಕೇಂದ್ರ ಅರಣ್ಯ ಇಲಾಖೆ ಹಾಗೂ ಬಂಡೂರಾ ನಾಲೆಯಿಂದ 2.18 ಟಿ.ಎಂ.ಸಿ ನೀರು ಪಡೆಯಲು ವನ್ಯಜೀವಿ ಮತ್ತು ಪರಿಸರ ಇಲಾಖೆ ಅನುಮತಿ ಬೇಕಿದೆ. ರಾಜ್ಯದ ಎಲ್ಲ ಸಂಸದರು ಪರವಾನಗಿ ಕೊಡಿಸಿ ಈ ಯೋಜನೆಗಳ ಶೀಘ್ರ ಜಾರಿಗೆ ಕೆಲಸ ಮಾಡಬೇಕಿದೆ’ ಎಂದು ಆಗ್ರಹಿಸಿದರು.