ಹುಬ್ಬಳ್ಳಿ/ಬೆಂಗಳೂರು: ನಿರಂತರ ಮಳೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಸೇರಿ ಕಾವೇರಿ ಕೊಳ್ಳದ 11 ಜಿಲ್ಲೆಗಳಲ್ಲಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವು ಸೇತುವೆಗಳು ಮುಳುಗಡೆಯಾಗಿದೆ.
ನೂರಾರು ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಆಯಾ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ನೂರಾರು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಜಲಾಶಯಗಳ ಮೂಲಕ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸುತ್ತಿರುವುದರಿಂದ ನದಿಗಳ ತೀರ ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ.
ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ ನದಿಗಳ ರೌದ್ರಾವತಾರಕ್ಕೆ ಜಲಪ್ರಳಯವೇ ಆಗಿದೆ. ಜಲಾಶಯಗಳು ಧುಮ್ಮಿಕ್ಕುತ್ತಿವೆ. 50ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ಕೆಲವು ಗ್ರಾಮಗಳು ನಡುಗಡ್ಡೆಯಾಗಿವೆ. ನೂರಾರು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸಪ್ತ ನದಿಗಳು ಉಕ್ಕೇರಿದ್ದು, 122 ಗ್ರಾಮಗಳಿಗೆ ಜಲದಿಗ್ಬಂಧನವಾಗಿದೆ. ಬೆಳಗಾವಿಯಲ್ಲಿ 32, ಬಾಗಲಕೋಟೆಯಲ್ಲಿ 12, ರಾಯಚೂರಿನಲ್ಲಿ 2, ಯಾದಗಿರಿ, ಕಂಪ್ಲಿಯಲ್ಲಿ ತಲಾ 1 ಸೇರಿದಂತೆ 48 ಸೇತುವೆಗಳು ಜಲಾವೃತವಾಗಿವೆ. ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಹಾಗೂ ತುಂಗಭದ್ರಾ ಡ್ಯಾಂನಿಂದ 1.07 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ನದಿ ತೀರದ ಕೊಪ್ಪಳ, ಗಂಗಾವತಿ, ಕಂಪ್ಲಿ, ಸಿರಗುಪ್ಪ, ಹಂಪಿಯಲ್ಲಿ ನೆರೆ ಆವರಿಸಿದೆ.