ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪತ್ರ ಚಳವಳಿ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸಕ್ಕೆ ಬಸವ ಜಯಮೃತ್ಯುಂಜಯ ಶ್ರೀ ಭೇಟಿ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ, ಬಸವ ಜಯಮೃತ್ಯುಂಜಯ ಶ್ರೀ, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಿವಾಸಕ್ಕೆ ನೂರಕ್ಕೂ ಹೆಚ್ಚು ಪದಾಧಿಕಾರಿಗಳೊಂದಿಗೆ ಭೇಟಿ ನೀಡಿದರು.
ಬಸವ ಜಯಮೃತ್ಯುಂಜಯ ಶ್ರೀ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪತ್ರ ನೀಡಿ, ಈ ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸ್ವಾಮೀಜಿ ಮಾತನಾಡಿ, “ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬ ಪ್ರಾರಂಭದಿಂದಲೂ ನಮ್ಮ ಹೋರಾಟಕ್ಕೆ ಬೆಂಬಲಿಸಿದೆ. ಭೂಮಿಯನ್ನು ನಂಬಿಕೊಂಡು ಜೀವನ ಮಾಡುತ್ತಿರುವ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಬೇಕು,” ಎಂದು ಹೇಳಿದರು.
ಪತ್ರವನ್ನು ಸ್ವೀಕರಿಸಿದ ಬಳಿಕ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, “ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಅಂತಿಮ ಘಟ್ಟದಲ್ಲಿದೆ. ಈಗ ಮೀಸಲಾತಿ ಸಿಗದಿದ್ದರೆ, ಮುಂದೆಂದೂ ನಮಗೆ ಮೀಸಲಾತಿ ಸಿಗಲ್ಲ. ಕೆಲವರು ನಮ್ಮ ಸಹನೆಗೆ ಅಗ್ನಿ ಪರೀಕ್ಷೆ ಮಾಡುತ್ತಿದ್ದಾರೆ. ಬೇರೆ ಸಮುದಾಯಕ್ಕೆ ಅನ್ಯಾಯ ಮಾಡಿ ನಮಗೆ ಮೀಸಲಾತಿ ನೀಡಿ ಎನ್ನುತ್ತಿಲ್ಲ. ಎಲ್ಲಾ ಸಮುದಾಯಗಳಿಗೆ ನೀಡುವಂತೆ ನಮಗೂ ಮೀಸಲಾತಿ ನೀಡಿ,” ಎಂದು ಒತ್ತಾಯಿಸಿದರು.