ಚಿಕ್ಕೋಡಿ: ಹೀರಾ ಮತ್ತು ಮೋತಿ ಅವರಿಗೆ ಮಹಾರಾಷ್ಟ್ರದ ಪಂಢರಪುರದ ವಿಠ್ಠಲನ ಸನ್ನಿಧಿಯಲ್ಲಿ ಆಷಾಢ ಏಕಾದಶಿಯಲ್ಲಿ ರಾಜ ಮರ್ಯಾದೆ ಸಿಗುತ್ತದೆ. ಪ್ರತಿ ವರ್ಷ ಪಂಢರಪುರಕ್ಕೆ ಹೊರಡುವ ದಿಂಡಿಯಲ್ಲಿ 315 ಕಿ.ಮೀ ದಾರಿಯುದ್ದಕ್ಕೂ ಇವರೂ ಹೆಜ್ಜೆ ಹಾಕುತ್ತಾರೆ..!
ಇದರಲ್ಲೇನು ವಿಶೇಷ ಎಂದುಕೊಳ್ಳಬೇಡಿ.
ಹೀರಾ, ಮೋತಿ ಎಂಬುದು ಎರಡು ಕುದುರೆಗಳ ಹೆಸರು. ತಾಲ್ಲೂಕಿನ ಅಂಕಲಿ ಗ್ರಾಮದ ಶಿಥೋಳೆ ಮನೆತನದವರು ಸಾಕಿರುವ ಈ ಕುದುರೆ ಜೋಡಿಗೆ ಪಂಢರಪುರದ ದೇವಸ್ಥಾನದಲ್ಲಿ ವಿಶೇಷ ಆತಿಥ್ಯ ಸಿಗುತ್ತದೆ.
ಪ್ರತಿವರ್ಷ ಜ್ಯೇಷ್ಠ ಮಾಸದ ದ್ವಾದಶಿಯಂದು ಅಂಕಲಿಯ ಶಿಥೋಳೆ ಸರ್ಕಾರದ ಅರಮನೆ ಆವರಣದ, ಅಂಬಾಬಾಯಿ ಮಂದಿರದಲ್ಲಿ ಕುದುರೆಗಳನ್ನು ಪೂಜಿಸಿ ಬೀಳ್ಕೊಡಲಾಗುತ್ತದೆ. ಅಂಕಲಿಯಿಂದ ಆಳಂದಿಗೆ ಹೊರಡುವ ಈ ಎರಡೂ ಕುದುರೆಗಳು ಪ್ರತಿ ದಿನ ಸುಮಾರು 30 ಕಿ.ಮೀ ನಡೆದುಕೊಂಡು 8-10 ದಿನಗಳಲ್ಲಿ ಆಳಂದಿ ತಲುಪುತ್ತವೆ. ಆಳಂದಿಯಲ್ಲಿ ನಾಲ್ಕೈದು ದಿನ ವಿಶ್ರಾಂತಿ ಪಡೆದು, ಅಲ್ಲಿಂದ 315 ಕಿ.ಮೀ ದೂರದ ಪಂಢರಪುರದವರೆಗೆ ನಡೆದುಕೊಂಡೇ ತಲುಪುತ್ತವೆ.
ಈ ಬಾರಿ ದಿಂಡಿಯಲ್ಲಿ ಜೂನ್ 18ರಂದು ಹೊರಟಿರುವ ಕುದುರೆಗಳು ಜುಲೈ 17ರಂದು ಪಂಢರಪುರವನ್ನು ತಲುಪುತ್ತವೆ.