ಚಿತ್ರದುರ್ಗ, ಜೂನ್ 22: ನಟ ದರ್ಶನ್ (Darshan) ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ದರ್ಶನ್ ಜೈಲು ಸೇರಿದ್ದಾರೆ.
ಈ ವಿಚಾರವಾಗಿ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ (Renukaswamy) ತಂದೆ ಕಾಶಿನಾಥಯ್ಯ ಪ್ರತಿಕ್ರಿಯಿಸಿದ್ದು, ಪೊಲೀಸರ ನ್ಯಾಯಯುತ ಶ್ರಮದಿಂದ ದರ್ಶನ್ ಜೈಲುಪಾಲಾಗಿದ್ದಾರೆ. ನನ್ನ ಮಗ ಅನುಭವಿಸಿದ ನೋವಿನ ಶಿಕ್ಷೆ ಆರೋಪಿಗಳಿಗೂ ಆಗಬೇಕು.
ಜೈಲು ಶಿಕ್ಷೆ, ಜೀವಾವಧಿ ಶಿಕ್ಷೆಗೂ ಹೊರತಾದ ಶಿಕ್ಷೆಯಾಗಬೇಕು ಎಂದಿದ್ದಾರೆ. ನನ್ನ ಮಗ ರೇಣುಕಾಸ್ವಾಮಿಗೆ ಯಾವ ರೀತಿ ಗಾಯಗಳು ಆಗಿದ್ದವೋ ಅದೇ ರೀತಿ ಗಾಯ ಆಗಬೇಕು, ವಿದ್ಯುತ್ ಶಾಕ್ ಶಿಕ್ಷೆ ಆಗಬೇಕು. ಏನೆಲ್ಲಾ ಬಳಸಿ ಹಲ್ಲೆ ಮಾಡಿದ್ದಾರೋ ಅದೇ ರೀತಿ ಹೊಡೆಯಬೇಕು. ಸಾರ್ವಜನಿಕ ಸ್ಥಳದಲ್ಲಿ ಕಲ್ಲಿನಿಂದ ಹೊಡೆದು ಸಾಯಿಸಬೇಕೆಂದು ಆಕ್ರೋಶಗೊಂಡರು.
ನಮ್ಮ ಇಡೀ ಕುಟುಂಬಕ್ಕೆ ಮಾನಸಿಕ ಹಿಂಸೆ ಆಗಿದೆ. ನಟ ದರ್ಶನ್ ಅಭಿಮಾನಿಗಳು ನಮ್ಮ ಸ್ಥಾನದಲ್ಲಿದ್ದು ಯೋಚಿಸಲಿ. ಕುರುಡು ಅಭಿಮಾನದಿಂದ ಬೆಂಬಲ ಬೇಡ. ಕೊಲೆ ಆರೋಪಿಯನ್ನು ದೇವರಂತೆ ಬಿಂಬಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಗಲ್ಲವೆಂಬ ನಂಬಿಕೆಯಿದೆ. ಆರೋಪಿಗೆ ತಕ್ಕ ಶಿಕ್ಷೆ ಕೊಡಿಸುತ್ತಾರೆಂಬ ನಂಬಿಕೆಯಿದೆ. ನ್ಯಾಯಾಂಗ ವ್ಯವಸ್ಥೆ, ಸರ್ಕಾರ, ಪೊಲೀಸರ ಮೇಲೆ ನಂಬಿಕೆಯಿದೆ ಎಂದು ಹೇಳಿದ್ದಾರೆ.