ನವದೆಹಲಿ: ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗುತ್ತಿದ್ದಂತೆ ಬಿಜೆಪಿ ನಂತರ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಟಿಡಿಪಿ ಎನ್ ಡಿಎ ಸಂಚಾಲಕ ಹುದ್ದೆಗೆ ಬೇಡಿಕೆ ಮುಂದಿಡುತ್ತಿದೆ ಎಂಬ ಮಾತುಗಳು ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಇದು ಬಿಜೆಪಿಗೆ ತಲೆನೋವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಎನ್‌ಡಿಎ ಸಂಚಾಲಕ ಸ್ಥಾನಕ್ಕಾಗಿ ಟಿಡಿಪಿ ಬಿಜೆಪಿ ಮುಂದೆ ಬೇಡಿಕೆಯಿಟ್ಟಿದೆ ಎಂಬುದು ಮೂಲಗಳನ್ನು ಆಧರಿಸಿದ ಮಾಧ್ಯಮ ವರದಿ. ಟಿಡಿಪಿ ಲೋಕಸಭೆ ಸ್ಪೀಕರ್ ಅಥವಾ ಎನ್‌ಡಿಎ ಸಂಚಾಲಕ ಹುದ್ದೆಯ ಬೇಡಿಕೆಯನ್ನು ಗಟ್ಟಿಯಾಗಿ ಮುಂದಿಡಲಿದೆ ಎಂದು ಹೇಳಲಾಗುತ್ತಿದೆ. ನಮ್ಮ ಪಕ್ಷದ ನಾಯಕರು ನಾಳೆ ನಡೆಯಲಿರುವ ಎನ್‌ಡಿಎ ಸಂಸದೀಯ ಪಕ್ಷದ ಸಭೆಯ ಮೊದಲು ಮಿತ್ರಪಕ್ಷಗಳ ಎಲ್ಲಾ ಸಂಭಾವ್ಯ ಬೇಡಿಕೆಗಳನ್ನು ಗಮನಿಸಲಿದೆ ಎಂದು ಟಿಎನ್‌ಐಇ ಪ್ರತಿನಿಧಿಗೆ ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ವಾಸ್ತವವಾಗಿ, ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಟಿಡಿಪಿ ಮತ್ತು ಜೆಡಿಯು ಬೇಡಿಕೆಗಳಿಗೆ ಸಂಬಂಧಿಸಿದಂತೆ ಹಲವು ಸುದ್ದಿಗಳು ಬರುತ್ತಿವೆ. ಸರ್ಕಾರ ರಚನೆಗೂ ಮುನ್ನ ಮಿತ್ರಪಕ್ಷಗಳೊಂದಿಗೆ ಮಾತನಾಡುವ ಕಾರ್ಯವನ್ನು ನಿಯೋಜಿಸಿರುವ ಹಿರಿಯ ನಾಯಕರು ಇತರ ಆಯ್ಕೆಗಳ ಬಗ್ಗೆಯೂ ನೋಡುತ್ತಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ನಿವಾಸದಲ್ಲಿ ಇಂದು ನಡೆದ ಸಭೆಯಲ್ಲಿ ಮಿತ್ರಪಕ್ಷಗಳ ಸಚಿವ ಸ್ಥಾನದ ಹಂಚಿಕೆ ಮತ್ತು ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಪಕ್ಷದೊಳಗಿನ ಸಂಭಾವ್ಯರನ್ನು ಆಯ್ಕೆ ಮಾಡುವುದು ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು. ಟಿಡಿಪಿ ಎನ್‌ಡಿಎ ಸಂಚಾಲಕ ಮತ್ತು ಲೋಕಸಭಾ ಸ್ಪೀಕರ್ ಹುದ್ದೆಗಳೆರಡಕ್ಕೂ ಬೇಡಿಕೆ ಇಟ್ಟರೆ ಬಿಜೆಪಿಯಿಂದ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಹಿರಿಯ ನಾಯಕರೊಬ್ಬರು ಹೇಳುತ್ತಾರೆ.