ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ರಣ ಕೇಕೆ ಹಾಕಿ ಆರ್ಭಟಿಸುತ್ತಿದೆ. ದಿನದಿಂದ ದಿನಕ್ಕೆ ಸರ್ಕಾರದ ಕೈ ಮೀರಿ ಸೋಂಕು ಹಬ್ಬುತ್ತಿದೆ. ಒಂದು ಕಡೆ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ. ಮತ್ತೊಂದು ಕಡೆ ಮಣ್ಣಲ್ಲಿ ಶವಗಳನ್ನು ಹೂಳಲು ಜಾಗ ಸಿಗುತ್ತಿಲ್ಲ. ಈ ನಡುವೆ ದೆಹಲಿಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿರುವ ಭೀತಿ ಸೃಷ್ಟಿಯಾಗಿದೆ.
ದೆಹಲಿ ರಾಜಕೀಯ ವ್ಯವಸ್ಥೆಯ ಶಕ್ತಿ ಕೇಂದ್ರ. ಕೇಂದ್ರಾಡಳಿತ ಪ್ರದೇಶವಾಗಿರುವ ಈ ರಾಜ್ಯ ಈಗ ಕೊರೊನಾ ವಿಚಾರದಲ್ಲಿ ದೊಡ್ಡ ಸದ್ದು ಮಾಡಲು ಆರಂಭಿಸಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕು ಹಬ್ಬುತ್ತಿರುವ ರಾಜ್ಯಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ಸೋಂಕು ಹಬ್ಬುತ್ತಿರುವ ತೀವ್ರತೆಗೆ ಅಧಿಕಾರ ನಡೆಸುತ್ತಿರುವ ಆಪ್ ಆದ್ಮಿ ಪಕ್ಷ ಅಕ್ಷರ ಸಹ ದಿಕ್ಕು ತೋಚದಂತಾಗಿದೆ.
ದೆಹಲಿಯಲ್ಲಿ ಸೋಮವಾರ ಸಂಜೆಯ ವರದಿಗೆ 1,007 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 29,943 ಮಂದಿಗೆ ಕೊರೊನಾ ವಕ್ಕರಿಸಿಕೊಂಡಿದೆ. ಈ ಪೈಕಿ 874 ಮಂದಿ ಸಾವನ್ನಪ್ಪಿದ್ರೆ 11,357 ಮಂದಿ ಗುಣಮುಖರಾಗಿದ್ದು, 17,712 ಸಕ್ರಿಯ ಪ್ರಕರಣಗಳನ್ನು ಒಳಗೊಂಡಿದೆ.
ದೆಹಲಿಯಂತಹ ಪುಟ್ಟ ರಾಜ್ಯದಲ್ಲಿ ಸೋಂಕು ಹರಡುತ್ತಿರುವ ತೀವ್ರತೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಹೈರಾಣ್ ಆಗಿದ್ದಾರೆ. ಆಸ್ಪತ್ರೆಯಲ್ಲಿ ಒಂದು ಕಡೆ ಬೆಡ್‍ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮತ್ತೊಂದು ಕಡೆ ಚಿಕ್ಕ ರಾಜ್ಯದಲ್ಲಿ ಸ್ಮಶಾನದ ಪ್ರದೇಶ ಕಡಿಮೆ ಇದ್ದು, ಶವ ಹೂಳಲು ಜಾಗ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ತೆಗೆದುಕೊಂಡಿದ್ದ ದೆಹಲಿ ಸರ್ಕಾರ, ಎಲ್ಲ ಖಾಸಗಿ ಆಸ್ಪತ್ರೆ 20% ರಷ್ಟು ಬೆಡ್‍ಗಳನ್ನು ಕೊರೊನಾಗೆ ಮೀಸಲಿಟ್ಟಿದ್ದು, ವ್ಯಕ್ತಿಯಲ್ಲಿ ತೀವ್ರ ಸೋಂಕಿನ ಗುಣಲಕ್ಷಣಗಳಿದ್ದರೇ ಮಾತ್ರ ಚಿಕಿತ್ಸೆ, ಸಣ್ಣ ಮತ್ತು ಮಧ್ಯಮ ಗುಣಲಕ್ಷಣಗಳಿರುವ ರೋಗಿಗಳು ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸೂಚಿಸಿದೆ.
ಕೇಜ್ರಿವಾಲ್‍ಗೂ ಕೊರೊನಾ ಕಂಟಕ:
ಈ ನಡುವೆ ಕೊರೊನಾ ಹೋರಾಟದಲ್ಲಿ ಮುನ್ನಲೇಯಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರಲ್ಲೂ ಕೊರೊನಾದ ಗುಣಲಕ್ಷಣಗಳು ಕಂಡು ಬಂದಿದೆ. ಭಾನುವಾರದಿಂದ ಅವರಲ್ಲಿ ತೀವ್ರ ಜ್ವರ, ಗಂಟಲು ನೋವು ಕಾಣಿಸಿಕೊಂಡಿದೆ. ಸದ್ಯ ಐಸೋಲೇಷನಲ್ಲಿರುವ ಕೇಜ್ರಿವಾಲ್ ವೈದ್ಯರ ಸಲಹೆ ಮೇರೆಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲಿದ್ದಾರೆ.
ಹೀಗೆ ಸರ್ಕಾರದ ನಿಯಂತ್ರಣ ಮೀರಿ ಬೆಳೆಯುತ್ತಿರುವ ಸೋಂಕು ಸಮುದಾಯದಲ್ಲಿ ಹರಡಿರುವ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೇತೃತ್ವದಲ್ಲಿ ಸಭೆಯ ನಡೆಯಲಿದೆ. ಸಭೆಯಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಹಾಗೂ ಇತರೆ ಉನ್ನತ ಅಧಿಕಾರಿಗಳು ಭಾಗಿಯಾಗಲಿದ್ದು, ದೆಹಲಿಯಲ್ಲಿ ಕೊರೊನಾ ಸೋಂಕು ಹಬ್ಬುತ್ತಿರುವ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅಲ್ಲದೇ ಸೋಂಕು ಹಬ್ಬುತ್ತಿರುವ ವೇಗ ಹಾಗೂ ಸರ್ಕಾರದ ನೀತಿ ನಿಯಮಗಳನ್ನು ಬದಲಿಸುವ ಬಗ್ಗೆ ಮಹತ್ವ ಚರ್ಚೆ ನಡೆಯಲಿದೆ. ದೆಹಲಿಯ ಸ್ಲಂಗಳಲ್ಲಿ ಹರಡಿರುವ ಸೋಂಕಿನ ಮೂಲಕ ಸಮುದಾಯಕ್ಕೆ ಹರಡಿರುವ ಭೀತಿ ದೆಹಲಿ ಸರ್ಕಾರಕ್ಕೆ ಎದುರಾಗಿದ್ದು, ಶಕ್ತಿ ಮೀರಿ ನಿಯಂತ್ರಿಸುವ ಕೆಲಸ ಮಾಡುವ ಪ್ರಯತ್ನದಲ್ಲಿದೆ.