ಹುಬ್ಬಳ್ಳಿ: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಭೇಟಿಯಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದೇನೆ. ಟಿಕೆಟ್ ನನಗೆ ನೀಡಲು ತೀರ್ಮಾನವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ’ ಎಂದು ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬೆಳಗಾವಿಯಿಂದ ಸ್ಪರ್ಧಿಸುವಂತೆ ವರಿಷ್ಠರು ಸೂಚಿಸಿದ್ದರು. ಇದಲ್ಲದೇ, ಬೆಳಗಾವಿ ನಾಯಕರ ಜೊತೆ ಚರ್ಚಿಸಿದ ನಂತರ ಸ್ಪರ್ಧಿಸಲು ತೀರ್ಮಾನಿಸಿದೆ. ಇದೇ ವಿಷಯವನ್ನು ಮುಖಂಡರಿಗೆ ತಿಳಿಸಿದ್ದೇನೆ’ ಎಂದರು.
‘ಒಳಗಿನವರು, ಹೊರಗಿನವರು ಎನ್ನುವ ಪ್ರಶ್ನೆ ಬರಲ್ಲ. ನಾನು ಬೆಳಗಾವಿ ಉಸ್ತುವಾರಿ ಸಚಿವನಾಗಿದ್ದಾಗ ಹಾಗೂ ವಿರೋಧ ಪಕ್ಷದ ನಾಯಕನಾಗಿದ್ದಾಗ ಬೆಳಗಾವಿ ಜೊತೆ ನಿರಂತರ ಒಡನಾಟ ಹೊಂದಿದ್ದೆ. ಸಾಕಷ್ಟು ಓಡಾಟ ನಡೆಸಿದ್ದೆ. ಅಲ್ಲಿನ ಕೆಲವು ನಾಯಕರು ದೂರವಾಣಿ ಕರೆ ಮಾಡಿ ನನ್ನನ್ನು ಸ್ವಾಗತಿಸಿದ್ದಾರೆ’ ಎಂದು ಹೇಳಿದರು.
ಅಸಮಾಧಾನ ಶಮನ ಮಾಡುವ ಕೆಲಸವನ್ನು ಪಕ್ಷದ ನಾಯಕರು ಮಾಡುತ್ತಾರೆ. ಪಕ್ಷದಲ್ಲಿ ಅತಿಹೆಚ್ಚು ಆಕಾಂಕ್ಷಿಗಳಿದ್ದಾರೆ. ಆ ಕಾರಣಕ್ಕೆ ಟಿಕೆಟ್ ಮಿಸ್ ಆದಾಗ ಅಸಮಾಧಾನ ಇದ್ದೆ ಇರುತ್ತೆ. ಇದಕ್ಕೆ ಏನೂ ಮಾಡಕ್ಕಾಗಲ್ಲ ಎಂದರು.