ಬೆಂಗಳೂರು, ಜನವರಿ 06: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಖಾಡಕ್ಕೆ ಧುಮುಕಲು ಸಿದ್ದತೆ ನಡೆಸಿದ್ದಾರೆ. ರಾಜ್ಯ ಪ್ರವಾಸ ಮೂಲಕ ಜನಾಭಿಪ್ರಾಯ ಸೃಷ್ಟಿಗೆ ಮುಂದಾಗಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ರಾಜ್ಯ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೀನಾಯವಾಗಿ ಸೋಲನ್ನು ಕಂಡಿತ್ತು. ಪಕ್ಷದೊಳಗಿನ ಭಿನ್ನಾಭಿಪ್ರಾಯ, ಕಾಂಗ್ರೆಸ್ ತಂತ್ರಗಾರಿಕೆ, ಗ್ಯಾರಂಟಿ ಯೋಜನೆಗಳು ಚುನಾವಣೆಯ ಮೇಲೆ ತೀವ್ರ ಸ್ವರೂಪದ ಪರಿಣಾಮವನ್ನು ಉಂಟು ಮಾಡಿದ್ದವು. ಪಕ್ಷಕ್ಕಾದ ಹಿನ್ನಲೆಯಿಂದ ಕಾರ್ಯಕರ್ತರಲ್ಲೂ ಹುಮ್ಮಸ್ಸು ಕಡಿಮೆಗೊಂಡಿವೆ. ಈ ನಡುವೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಲೋಕಸಭೆ ಚುನಾವಣೆಗೆ ಮೈತ್ರಿಯ ನಿರ್ಧಾರನೂ ಆಗಿದೆ.ಹೀಗಾಗಿ ಪಕ್ಷಕ್ಕೆ ಇನ್ನಷ್ಟು ಚೈತನ್ಯ ತುಂಬಲು ಬಿಜೆಪಿ ನಾಯಕರು ಯಡಿಯೂರಪ್ಪ ಅವರ ಮೂಲಕ ರಾಜ್ಯಾದ್ಯಂತ ಪ್ರವಾಸಕ್ಕೆ ತಯಾರಿ ನಡೆಸಿದ್ದಾರೆ. ಇನ್ನೂ ರಾಜ್ಯ ಪ್ರವಾಸದ ಕುರಿತು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಬಿಜೆಪಿ ಬಲಪಡಿಸಲು ಶೀಘ್ರವೇ ದಿನಕ್ಕೆ ಎರಡು ಜಿಲ್ಲೆಗಳಂತೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ನಡೆದ ‘ಬಲವರ್ಧನೆಗಾಗಿ ಭೀಮ ಸಮಾವೇಶ’ದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲ ಸ್ಥಾನಗಳನ್ನು ಗೆದ್ದು, ಮೋದಿಜೀ ಅವರ ಕೈಯನ್ನು ಬಲಪಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯಾಧ್ಯಕ್ಷರಲ್ಲಿ ಕೇಳಿ ನಡೆಸುವ ನನ್ನ ಪ್ರವಾಸದ ವೇಳೆ ಮುಂಬರುವ ಚುನಾವಣೆ ದೃಷ್ಟಿಯಿಂದ ಪ್ರಮುಖರ ಜೊತೆ ಮಾತನಾಡುವೆ ಎಂದ ಅವರು, ವಿಜಯೇಂದ್ರ ಅವರು ಅಧ್ಯಕ್ಷರಾದ ಬಳಿಕ ಬಿಜೆಪಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಲ ತುಂಬಲು ಅವರು ಮನವಿ ಮಾಡಿದರು.
ಈ ವೇಳೆ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಮಾತನಾಡಿ, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ದೃಷ್ಟಿ ಬೊಟ್ಟಿಗಾಗಿ ಕಾಂಗ್ರೆಸ್ಸಿಗೆ ಒಂದು ಸ್ಥಾನ ಲಭಿಸಿತ್ತು. ಈ ಬಾರಿ ದೃಷ್ಟಿ ಬೊಟ್ಟೂ ಇರುವುದಿಲ್ಲ. ಆ ರೀತಿಯ ತೀರ್ಮಾನವನ್ನು ಜನರು ಮಾಡಿದ್ದಾರೆ. ಇವರು ಇದೇರೀತಿ ಮುಸ್ಲಿಂ ಓಲೈಕೆ ಮಾಡುತ್ತಿದ್ದರೆ ಈ ಸರಕಾರಕ್ಕೆ ಕಂಟಕ ಕಾದಿದೆ. ಶ್ರೀರಾಮನಿಗೆ ಅನ್ಯಾಯ ಮಾಡಿದವರು ಉದ್ಧಾರ ಆಗುವುದಿಲ್ಲ. ಹಿಂದೂ ವಿರೋಧಿ ನಿಲುವಿನ ಕಾಂಗ್ರೆಸ್ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧೂಳೀಪಟ ಆಗಲಿದೆ. ಹಿಂದೂ ಕಾರ್ಯಕರ್ತರ ಬಂಧನ ಒಂದೆಡೆ, ಇನ್ನೊಂದೆಡೆ ಮೌಲ್ವಿಗಳಿಗೆ 10 ಸಾವಿರ ಕೋಟಿ ಕೊಡುವುದಾಗಿ ಪ್ರಕಟಣೆ ಮಾಡುವ ಈ ಸರಕಾರವು ಮುಸ್ಲಿಂ ಕಾಲೊನಿಗಳಿಗೆ 1 ಸಾವಿರ ಕೋಟಿ ಹಣ ಬಿಡುಗಡೆಗೆ ಮುಂದಾಗಿದೆ. ಬರಗಾಲದಿಂದ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೊಡಲು ಇವರ ಯೋಗ್ಯತೆಗೆ ದುಡ್ಡಿಲ್ಲ.
ಸಂಸತ್ ಚುನಾವಣೆಯಲ್ಲಿ ಮುಸ್ಲಿಂ ಮತಕ್ಕಾಗಿ ಒಂದು ರೀತಿ ತುಷ್ಟೀಕರಣ ರಾಜಕಾರಣವನ್ನು ಮಾಡುತ್ತಿರುವ ಕಾಂಗ್ರೆಸ್, ಬ್ರಿಟಿಷರಂತೆ ಒಡೆದಾಳುವ ನೀತಿ ಮಾಡುತ್ತಿದೆ. ಇದಕ್ಕಾಗಿಯೇ ಎಲ್ಲ ಕಡೆ ಹಿಂದೂ ಕಾರ್ಯಕರ್ತರ ಕೇಸುಗಳನ್ನು ಓಪನ್ ಮಾಡುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ಸಿಗರ ತಟ್ಟೆಯಲ್ಲಿ ಸತ್ತ ಹೆಗ್ಗಣ ಬಿದ್ದಿದೆ. ಅದನ್ನು ಬಿಟ್ಟು ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಹುಡುಕುತ್ತಿದ್ದಾರೆ. ಸ್ವತಃ ನಿಮ್ಮ ರಾಷ್ಟ್ರೀಯ ಮುಖಂಡರಾದ ರಾಹುಲ್ ಗಾಂಧಿಯವರ ಮೇಲೇ ಹತ್ತಾರು ಕೇಸಿದೆ. ಸೋನಿಯಾ ಗಾಂಧಿಯವರ ಮೇಲೂ ಕೇಸಿದೆ. ಬಡಪಾಯಿ ಆಟೋ ಚಾಲಕನ ಮೇಲೆ ಬೇಕೆಂದೇ ಕೇಸು ಹಾಕಿದ್ದಾರೆ. ಕೋರ್ಟ್ ಅವರನ್ನು ಅಪರಾಧಿ ಎಂದಿಲ್ಲ. ಕಾಂಗ್ರೆಸ್ ಪಕ್ಷ ಅವರನ್ನು ಅಪರಾಧಿ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.