ಬಳ್ಳಾರಿ : ಮದುವೆಗೆ ಹುಡುಗಿ ಮನೆಯವರು ಒಪ್ಪದ ಕಾರಣಕ್ಕೆ ಸಖತ್ ಪ್ಲ್ಯಾನ್ ಮಾಡಿ ಹೀರೋ ಹುಡುಗಿಯನ್ನು ಕರೆಸಿ ಕಾರಿನಲ್ಲೇ ಮದುವೆಯಾಗುತ್ತಾನೆ. ಇದು ಕನ್ನಡದ ಕಿರಾತಕ ಸಿನಿಮಾದ ಕಥೆ. ಇದು ನಿಮಗೆ ಗೊತ್ತಿರುವ ವಿಚಾರ. ಇದೀಗ ಅದೇ ರೀತಿಯ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಆದರೆ ಇದು ಕೊಂಚ ಡಿಫರೆಂಟ್ ಆಗಿದೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಶಿವಪ್ರಸಾದ್ ಮತ್ತು ಕೊಪ್ಪಳ ಮೂಲದ ಯುವತಿ ಅಮೃತಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಶಿವಪ್ರಸಾದ್ ಕೆಳಜಾತಿಗೆ ಸೇರಿದವನಾಗಿದ್ದಾನೆ ಎಂಬ ಕಾರಣಕ್ಕೆ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಇಬ್ಬರು ಮಂಗಳವಾರ ಸಂಜೆ ಓಡಿಹೋಗಿ ಸಿರುಗುಪ್ಪ ನಗರದಲ್ಲಿ ಕಾರಿನಲ್ಲಿಯೇ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ.ನಂತರ ಇಬ್ಬರು ತೆಕ್ಕಲು ಪೊಲೀಸ್ ಠಾಣೆಗೆ ಬಂದು ರಿಜಿಸ್ಟರ್ ಮದುವೆ ಮಾಡಿಸಿ ಎಂದು ಮೊರೆಯಿಟ್ಟಿದ್ದಾರೆ, ರಾತ್ರಿಯಾಗಿದ್ದರಿಂದ ಪೊಲೀಸರು ಯುವತಿ ಅಮೃತಾಳನ್ನು ಬಳ್ಳಾರಿ ಶಾಂತಿಧಾಮ ಸಾಂತ್ವನ ಕೇಂದ್ರದಲ್ಲಿ ತಂದು ಬಿಟ್ಟಿದ್ದಾರೆ.
ಈ ವಿಚಾರ ತಿಳಿದ ಅಮೃತಾ ಪೋಷಕರು ಶಾಂತಿಧಾಮ ಸಾಂತ್ವನ ಕೇಂದ್ರಕ್ಕೆ ಬಂದಿದ್ದಾರೆ, ಈ ವೇಳೆ ಅಲ್ಲಿ ದೊಡ್ಡ ಹೈ ಡ್ರಾಮಾ ನಡೆದಿದೆ. ಅಮೃತಾಳನ್ನು ಪೋಷಕರು ಬಲವಂತವಾಗಿ ಮನೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ ಯುವತಿ ಬರಲು ಒಪ್ಪದೇ ರಂಪಾಟ ಮಾಡಿದ್ದಾಳೆ. ಶಿವಪ್ರಸಾದ್ ಕೂಡ ಹೆಂಡತಿಯನ್ನು ಕಳುಹಿಸಲು ಒಪ್ಪದೇ ಗಲಾಟೆ ಮಾಡಿದ್ದಾನೆ. ನಂತರ ಪೊಲೀಸರು ಪೋಷಕರ ಮನವೊಲಿಸಿದ್ದು, ಪೋಷಕರು ಅಮೃತಾಳನ್ನು ಶಿವಪ್ರಸಾದ್ ಜೊತೆ ಬಿಟ್ಟು ಹೋಗಿದ್ದಾರೆ.
Laxmi News 24×7