ಬೆಳಗಾವಿ: ವಂಟಮೂರಿ ಪ್ರಕರಣದಲ್ಲಿ ಬಿಜೆಪಿ ಆರೋಪ ಮಾಡುತ್ತಿರುವುದಕ್ಕೆ ತಿರುಗೇಟು ಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಗೃಹ ಸಚಿವರು ಸ್ಥಳಕ್ಕೆ ಭೇಟಿ ವಿಚಾರಣೆ ಮಾಡಿದ್ದಾರೆ. ಅವರು ಯಾಕೆ ರಾಜೀನಾಮೆ ಕೊಡಬೇಕು.? ಯಾರು ಕೂಡ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಏನು ಮಾಡಬೇಕು ಎಂದು ಸಲಹೆ ನೀಡಲಿ ಎಂದು ತಿಳಿಸಿದ್ದಾರೆ.
ವಂಟಮೂರಿ ಪ್ರಕರಣದಲ್ಲಿ ಬಿಜೆಪಿ ರಾಜಕೀಯ: ಬಿಜೆಪಿ ವಂಟಮೂರಿ ಪ್ರಕರಣಕ್ಕೆ ಹೆಚ್ಚು ಆಸಕ್ತಿ ತೋರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲದರಲ್ಲೂ ಬಿಜೆಪಿ ರಾಜಕೀಯ ಮಾಡ್ತಾರೆ. ಅದಕ್ಕೆ ಉತ್ತರ ಕೂಡಲಾಗಿದೆ. ಅವರು ರಾಜಕೀಯ ಮಾಡ್ತಾರೆ ಎಂದು ನಾವು ಮಾಡಲ್ಲ. ಅಲ್ಲಿ ಆಗಿದ್ದ ಘಟನೆ ಯಾರಿಗೆ ಚೇಂಜ್ ಮಾಡಲು ಸಾಧ್ಯವಿಲ್ಲ. ಇನ್ನೂ ಹತ್ತು ಸಾರಿ ಬಂದ್ರೂ ವಸ್ತು ಸ್ಥಿತಿ ಹಾಗೆ ಇರುತ್ತದೆ.
ಬಿಜೆಪಿಯವರು ಬೆಳಗಾವಿ ಘಟನೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ದೇಶದಲ್ಲಿ ಇಂಥ ಬಹಳಷ್ಟು ಘಟನೆಗಳು ಆಗಿವೆ, ಅಲ್ಲಿಗೂ ಹೋಗಬೇಕು, ಇಲ್ಲಿ ಅಷ್ಟೇ ಬಂದರೆ ಅದು ರಾಜಕೀಯ ಅನಿಸುತ್ತೆ. ಮಣಿಪುರದ ಘಟನೆ ಮೂರು ತಿಂಗಳು ಇಡೀ ಜಗತ್ತೇ ನೋಡಿತ್ತು. ಆದರೂ ಅಲ್ಲಿ ಯಾರು ಹೋಗಲಿಲ್ಲ ಎಂದು ಸತೀಶ ಜಾರಕಿಹೊಳಿ ತಿರುಗೇಟು ಕೊಟ್ಟರು.
ಸಂತ್ರಸ್ತ ಮಹಿಳೆಗೆ ಸರ್ಕಾರ ಪರಿಹಾರ ಘೋಷಣೆ: ಸಂತ್ರಸ್ತ ಮಹಿಳೆಗೆ ಸರ್ಕಾರದ ಪರಿಹಾರ ಘೋಷಿಸಿದೆ. ಸಿಎಂ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಎರಡು ಎಕರೆ ಜಮೀನು ಘೋಷಣೆ ಮಾಡಲಾಗಿದೆ. ಅಧಿಕಾರಿಗಳ ಮೂಲಕ ಕೊಡುವ ಕೆಲಸ ಆಗುತ್ತೆ. ಸಿಐಡಿಗೆ ಹಸ್ತಾಂತರ ಮಾಡುವ ಮುಂಚೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಇಬ್ಬರು ಆರೋಪಿಗಳ ಬಂಧನ ಆಗಬೇಕು. ಒತ್ತಡ ಪ್ರಭಾವ ಬೀರದಂತೆ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ನಮ್ಮ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಸಾರ್ವಜನಿಕರ ಜವಾಬ್ದಾರಿಯೂ ಇದೆ:ಇಂತಹದ್ದೊಂದು ಘಟನೆ ನಮ್ಮ ಭಾಗದಲ್ಲಿ ಆಗಬಾರದಿತ್ತು, ಆಗಿದೆ. ಮುಂದೆ ಈ ರೀತಿ ಘಟನೆ ಆಗದಂತೆ ಎಲ್ಲರೂ ಪ್ರಯತ್ನ ಮಾಡೋಣ. ಇದರಲ್ಲಿ ನಾವಷ್ಟೆ ಅಲ್ಲ ಸಾರ್ವಜನಿಕ ಜವಾಬ್ದಾರಿಯೂ ಇದೆ. ಘಟನೆ ಆದಾಗ ಸಾರ್ವಜನಿಕರು ಇರ್ತಾರೆ, ಅವರು ಬಗೆಹರಿಸಲು ಮುಂದಾಗಬೇಕು. ನಿನ್ನೆ ಹೈಕೋರ್ಟ್ ಕೂಡ ಅದನ್ನೇ ಹೇಳಿದೆ. ಸಾರ್ವಜನಿಕರು ಸ್ಪಂದಿಸುವ ಕೆಲಸ ಮಾಡಬೇಕೆಂದು ಹೇಳಿದೆ. ಮುಂದಿನ ದಿನಗಳಲ್ಲಿ ಈ ರೀತಿ ಘಟನೆ ಆಗದಂತೆ ನೋಡಿಕೊಳ್ಳುವುದಷ್ಟೇ ನಮ್ಮ ಜವಾಬ್ದಾರಿ ಎಂದರು.
ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಹೆಸರು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಎಲ್ಲ ಕಡೆ ಅದು ಇದ್ದಿದ್ದೆ ಇಡೀ ದೇಶದಲ್ಲಿ ನಡೆಯುತ್ತೆ. ಎಂಎಲ್‌ಎ, ಸಚಿವರ ಹೆಸರು ಅಪಾಯಗಳು ಬಂದಾಗ ತರುತ್ತಾರೆ. ಇನ್ನು ನಮ್ಮ ಗಮನಕ್ಕೂ ಕೆಲವು ಬಂದಿರುತ್ತವೆ. ನಮಗೆ ಗೌರವ ನೀಡುವುದಕ್ಕೋಸ್ಕರ ಪೊಲೀಸರು ಸುಮ್ಮನೆ ಕೂರಬಾರದು. ಹಾಗೆ ಸುಮ್ಮನೆ ಕುಳಿತರೆ ಅವರ ತಲೆ ದಂಡವಾಗುತ್ತೆ. ಅವರ ಕೆಲಸ ಅವರು ಮಾಡಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.