ಧಾರವಾಡ, ಡಿ.08: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(Hescom)ವು ಒಟ್ಟು ಏಳು ಜಿಲ್ಲೆಗಳಲ್ಲಿ ಬರುತ್ತದೆ. ರಾಜ್ಯದ ಪ್ರತಿಷ್ಠಿತ ವಿದ್ಯುತ್ ಸರಬರಾಜು ಕಂಪನಿಗಳ ಪೈಕಿ ಇದು ಕೂಡ ಒಂದು. ಈ ಕಂಪನಿ ಅಡಿಯಲ್ಲಿ ರಾಜ್ಯದ ಎರಡನೇ ದೊಡ್ಡ ನಗರ ಖ್ಯಾತಿಯಹುಬ್ಬಳ್ಳಿ-ಧಾರವಾಡ(Hubballi-Dharwad) ಅವಳಿ ನಗರ ಹಾಗೂ ಬೆಳಗಾವಿ ಬರುತ್ತವೆ. ಇದೀಗ ಈ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿನ ಸರಕಾರಿ ಕಚೇರಿಗಳಿಂದಲೇ ಹೆಸ್ಕಾಂ ಗೆ ನೂರಾರು ಕೋಟಿ ರೂಪಾಯಿ ವಿದ್ಯುತ್ ಬಿಲ್ ಬರಬೇಕಿದೆ. ಇಂತಹ ವೇಳೆ ಧಾರವಾಡ ಜಿಲ್ಲೆಯಲ್ಲಿಯೇ ಕೋಟಿ ಕೋಟಿ ಬಿಲ್ ಸರಕಾರಿ ಕಚೇರಿಗಳಿಂದಲೇ ಬರಬೇಕಿದೆ.
ಹಲವಾರು ಕಚೇರಿಗಳ ವಿದ್ಯುತ್ ಬಿಲ್ ಕೋಟಿ ಕೋಟಿ ದಾಟಿದ್ದರೂ, ಅವುಗಳ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಕತ್ತರಿಸಲು ಬರುವುದಿಲ್ಲ. ಇದಕ್ಕೆ ಒಂದು ಉದಾಹರಣೆ ಎಂದರೆ ಅವಳಿ ನಗರಕ್ಕೆ ನೀರು ಪೂರೈಸಲು ಹು-ಧಾ ಮಹಾನಗರ ಪಾಲಿಕೆ ತೆಗೆದುಕೊಳ್ಳುತ್ತಿರುವ ವಿದ್ಯುತ್ ಉಪಯೋಗ. ಹೌದು, ಇದೀಗ ಇದೇ ಕೋಟಿ ಕೋಟಿ ಲೆಕ್ಕದಲ್ಲಿ ಬಾಕಿ ಉಳಿದಿದೆ. ಜಿಲ್ಲೆಯ ಗ್ರಾಮ ಪಂಚಾಯತಿಗಳಿಂದಲೇ ಸುಮಾರು 10 ಕೋಟಿ ರೂಪಾಯಿ ಬಿಲ್ ಪಾವತಿಯಾಗಬೇಕಿದೆ. ಇನ್ನು ಮಹಾನಗರ ಪಾಲಿಕೆಯೇ ಸುಮಾರು 16 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ.