Breaking News

ಅಬಕಾರಿ ಸಿಎಲ್ 7 ಪರವಾನಗಿ ಅಕ್ರಮ: ಆಡಳಿತ-ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ

Spread the love

ಬೆಳಗಾವಿ/ ಬೆಂಗಳೂರು : ರಾಜ್ಯದ ಹಲವು ಕಡೆ ಅಬಕಾರಿ ಇಲಾಖೆಯಲ್ಲಿನ ಸಿಎಲ್ -7 ಪರವಾನಗಿಯಲ್ಲಿ ಅಕ್ರಮ ನಡೆದಿದ್ದು, ಇದರ ಬಗ್ಗೆ ತನಿಖೆಯಾಗಬೇಕೆಂಬ ವಿಚಾರ ವಿಧಾನಸಭೆಯಲ್ಲಿ ಇಂದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ವಾಗ್ವಾದ ನಡೆಯಿತು.

ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರು, ಸಿಎಲ್ 7 ಪರವಾನಗಿಯಲ್ಲಿ ಅಕ್ರಮ ನಡೆದಿದೆ. ನಿಯಮಗಳನ್ನು ಗಾಳಿಗೆ ತೂರಿ ಪರವಾನಗಿ ನೀಡಲಾಗಿದೆ ಎಂದು ಸದನದಲ್ಲಿ ಪ್ರಸ್ತಾಪಿಸಿದರು. ಕೋಲಾರ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ ರಂಗಪ್ಪ ಎಂಬ ಅಧಿಕಾರಿ ನಿಯಮಗಳನ್ನು ಗಾಳಿಗೆ ತೂರಿ ಸಿಎಲ್ 7 ಎಲ್ಲ ಬಾರ್​ಗಳಿಗೂ ಪಾಲುದಾರರಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸಿಎಲ್ 7 ಪರವಾನಗಿ ಅಕ್ರಮದ ಬಗ್ಗೆ ತನಿಖೆ ನಡೆಸಬೇಕೆಂದು ಶಾಸಕರು ಒತ್ತಾಯಿಸಿದರು.

ಇದೇ ವೇಳೆ ಆಡಳಿತ ಪಕ್ಷದ ಸದಸ್ಯರಾದ ಶಿವಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ, ನಂಜೇಗೌಡ, ನರೇಂದ್ರಸ್ವಾಮಿ ಮತ್ತಿತರರು ದನಿಗೂಡಿಸಿ ಸಿಎಲ್ 7 ಪರವಾನಗಿಯನ್ನು ಬೇಕಾಬಿಟ್ಟಿ ಕೊಡಲಾಗಿದೆ. ಇದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಗಿರುವ ಅಕ್ರಮವಾಗಿದ್ದು, ತನಿಖೆಗೆ ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಎದ್ದುನಿಂತ ಮಾಜಿ ಸಚಿವ ಗೋಪಾಲಯ್ಯ ಅವರು, ನಿಮಗೆ ಧೈರ್ಯ, ತಾಕತ್ತು ಇದ್ದರೆ ಸಿಎಲ್ 7 ಪರವಾನಗಿ ಅಕ್ರಮದ ಬಗ್ಗೆ ತನಿಖೆ ನಡೆಸಿ, ಪರವಾನಗಿ ರದ್ದು ಮಾಡಿ ಎಂದು ಆಗ್ರಹಿಸಿದರು. ಇದರಿಂದ ಸಿಟ್ಟಿಗೆದ್ದ ಆಡಳಿತ ಪಕ್ಷದ ಸದಸ್ಯರು, ಬಿಜೆಪಿ ಶಾಸಕರ ಮೇಲೆ ಮುಗಿಬಿದ್ದರು.

ಆರೋಪ – ಪ್ರತ್ಯಾರೋಪಗಳು ನಡೆದು ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು. ಆಗ ಎರಡೂ ಕಡೆಯವರನ್ನು ಸ್ಪೀಕರ್ ಯು ಟಿ ಖಾದರ್ ಸಮಾಧಾನಪಡಿಸಿದರು. ನಂತರ ಇದಕ್ಕೆ ಉತ್ತರ ನೀಡಿದ ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಅವರು, ಸಿಎಲ್ 7 ಪರವಾನಗಿ ಸಂದರ್ಭದಲ್ಲಿ ಕಟ್ಟಡ ವಿನ್ಯಾಸ ಮತ್ತು ವಾಹನದ ನಿಲುಗಡೆ ವಿಸ್ತೀರ್ಣದ ಬಗ್ಗೆ ನಿಯಮಗಳಿಲ್ಲ. ಈ ನಿಯಮಗಳನ್ನು ರೂಪಿಸಿ ಸಿಎಲ್ 7 ಪರವಾನಗಿ, ಸನ್ನದ್ದುಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಚಕಮಕಿ, ಗದ್ದಲದ ವಾತಾವರಣ: ಇನ್ನು ಕೋಲಾರದ ಅಬಕಾರಿ ಇಲಾಖೆ ಅಧಿಕಾರಿ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಮಾಹಿತಿ ತರಿಸಿಕೊಂಡು ತಪ್ಪಿತಸ್ಥರೆಂದು ಕಂಡುಬಂದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಚಿವರ ಮಾತಿಗೆ ಒಪ್ಪದ ಆಡಳಿತ ಪಕ್ಷದ ಸದಸ್ಯರು ಈ ಕುರಿತು ತನಿಖೆಯಾಗಲೇಬೇಕು, ತನಿಖೆ ಮಾಡಿ ಎಂದು ಒತ್ತಾಯಿಸಿದರು. ಆಗ ಮತ್ತೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲದ ವಾತಾವರಣ ಉಂಟಾಯಿತು.

ಈ ಗದ್ದಲದ ಮಧ್ಯೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು, ಸಿಎಲ್ 7 ಪರವಾನಗಿಯಲ್ಲಿ ಅಕ್ರಮಗಳಾಗಿರುವ ಬಗ್ಗೆ ಸದಸ್ಯರು ಪ್ರಸ್ತಾಪಿಸಿದ್ದಾರೆ. ಇದು ಯಾವ ಸರ್ಕಾರದಲ್ಲಾದರೂ ಆಗಿರಲಿ, ತನಿಖೆ ನಡೆಸಿ, ಅಕ್ರಮವಾಗಿದ್ದರೆ ಆ ಪರವಾನಗಿಯನ್ನು ರದ್ದು ಮಾಡಿ ಎಂದು ಆಗ್ರಹಿಸಿದರು.


Spread the love

About Laxminews 24x7

Check Also

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರವೇ ಪತನವಾಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟ‌ರ್ ಭವಿಷ್ಯ ನುಡಿದಿದ್ದಾರೆ.

Spread the love ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರವೇ ಪತನವಾಗುತ್ತದೆ ಎಂದು ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ