ಬೆಳಗಾವಿ : ನಾನು ಸಾರಿಗೆ ಮಂತ್ರಿ ಆಗಿದ್ದಾಗ ನೇಮಕಾತಿ ಆಗಿದ್ದೇ ಕೊನೆ. ಕಳೆದ ಏಳು ವರ್ಷಗಳಲ್ಲಿ 13,888 ಸಿಬ್ಬಂದಿ ನಿವೃತ್ತಿ ಹೊಂದಿದ್ದಾರೆ. ಈಗ 9 ಸಾವಿರ ಜನರನ್ನು ಹೊಸದಾಗಿ ನೇಮಕ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಅನುಮತಿ ಸಿಕ್ಕಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್ನಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಮತ್ತು ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಮನವಿ ಸ್ವೀಕರಿಸಿದ್ದೇನೆ. ಬಿಸಿ ಊಟ ತಯಾರಿಸುವವರಿಗೆ ಗೌರವಧನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಶಿಳ್ಳೇಕ್ಯಾತ ಸಮಾಜದ ಬೇಡಿಕೆ, ಮಹಿಳೆಯರಿಗೆ ಅನಧಿಕೃತ ಗರ್ಭಕೋಶ ಆಪರೇಷನ್, ಹೀಗೆ ಅನೇಕ ಸಮಸ್ಯೆಗಳಿವೆ. ಪ್ರತಿಭಟನಾಕಾರರು ಕೊಟ್ಟಿರುವ ಮನವಿಗಳನ್ನು ಸಿಎಂಗೆ ಕೊಡುತ್ತೇನೆ. ಸರ್ಕಾರ ಕೂಡ ಅವರಿಗೆ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು.
ಉತ್ತರ ಕರ್ನಾಟಕದ ಬಗ್ಗೆ ತಾರತಮ್ಯ ವಿಚಾರಕ್ಕೆ ಪ್ರತಿಕ್ರಿಯಿಸಿ, ತಾರತಮ್ಯ ಅಷ್ಟೇನೂ ಇಲ್ಲ. ಕೆಲವೊಂದು ಲೋಪದೋಷಗಳು ಇರಬಹುದು. ಆದರೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಸಾಕಷ್ಟು ಅಭಿವೃದ್ಧಿ ಆಗಿವೆ. ಸಾಕಷ್ಟು ನೀರಾವರಿ ಯೋಜನೆ, ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಒತ್ತು ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುವರ್ಣ ಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡಿದ್ರೆ ಜನರು ಬರ್ತಾರೆ, ಹೋಗ್ತಾರೆ. ರಾಜ್ಯಮಟ್ಟದ ಕಚೇರಿ ಸ್ಥಳಾಂತರ ಮಾಡಬೇಕು. ಮಹದಾಯಿ ಯೋಜನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಶಕ್ತಿ ಯೋಜನೆ ಜಾರಿ ಪರಿಣಾಮ ಶಾಲಾ ಮಕ್ಕಳಿಗೆ ಬಸ್ ಸಮಸ್ಯೆ ಆಗುತ್ತಿರುವ ಬಗ್ಗೆ ಮಾತನಾಡಿ, ಶಕ್ತಿ ಯೋಜನೆ ಕಾರ್ಯಕ್ರಮ ಆದ್ಮೇಲೆ ಜನರು ಸರ್ಕಾರಿ ಬಸ್ಗಳಲ್ಲಿ ಹೆಚ್ಚು ಓಡಾಡುತ್ತಿದ್ದಾರೆ. ಮೊದಲು 85 ಲಕ್ಷ ಜನರು ಓಡಾಡುತ್ತಿದ್ದರು. ಈಗ 1 ಕೋಟಿ ಜನರು ಓಡಾಟ ಮಾಡುತ್ತಿದ್ದಾರೆ. ಶಾಲೆಗೆ ಹೋಗುವಾಗ, ಬರುವಾಗ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಮಹಿಳೆಯರ ಓಡಾಟ ಕೂಡ ಹೆಚ್ಚಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಕಳೆದ ನಾಲ್ಕು ವರ್ಷದಲ್ಲಿ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ. ಹೊಸ ಬಸ್ ತಗೊಂಡು ಹಳೆಯ ಬಸ್ ಸ್ಕ್ಯ್ರಾಪ್ ಮಾಡಬೇಕು. ಹೀಗೆ ಆಗಿದ್ರೆ ಏನು ಸಮಸ್ಯೆ ಆಗುತ್ತಿರಲಿಲ್ಲ ಎಂದು ತಿಳಿಸಿದರು.