ಹುಬ್ಬಳ್ಳಿ : ಬಾಂಬ್ ಎಲ್ಲಿ ಸ್ಫೋಟ ಆಗಿದೆಯಾ? ಕರೆ ಬಂದ್ರೆ ಏನಾಯ್ತು, ಅಂತಹ ಕರೆಗಳು ಸಾಕಷ್ಟು ಬರುತ್ತವೆ ಎಂದು ಹುಬ್ಬಳ್ಳಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಏನು ಆಗಿಲ್ಲ ಅಂತಾ ನಿನ್ನೆ ಸ್ಪಷ್ಟೀಕರಣ ಕೊಟ್ಟಾಗಿದೆ. ಅದ್ಯಾವುದೋ ಒಂದು ವಿಷಯಕ್ಕೆ ನಾವು ಇಷ್ಟೆಲ್ಲಾ ಸಮಯ ವ್ಯರ್ಥ ಮಾಡಿದರೆ ಹೇಗೆ ಎಂದರು.
ಅದಕ್ಕೆ ಸರ್ಕಾರ ಪೊಲೀಸ್ ಇಲಾಖೆ ಇದೆ. ಅದನ್ನ ಮಾಡೇ ಮಾಡ್ತಾರೆ. ಬೇರೆ ಸಮಸ್ಯೆಗಳು ಸಾಕಷ್ಟಿದೆ. ಅದರ ಕುರಿತು ನಮಗೂ ಹೇಳೋಕೆ ಬರಲ್ಲ. ವಿರೋಧ ಪಕ್ಷದವರದ್ದು ಸಮಸ್ಯೆ, ನಮ್ಮದು ಸಮಸ್ಯೆ. ಕೊನೆಗೆ ಜನರು ಗೊಂದಲದಲ್ಲಿ ಸಿಲುಕುತ್ತಾರೆ ಎಂದರು.
ಲೋಕಸಭಾ ಚುನಾವಣೆ ಸಿದ್ಧತೆ ವಿಚಾರ, ಈಗಾಗಲೇ ನಮ್ಮ ಪಕ್ಷದಿಂದ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಆಕಾಂಕ್ಷಿಗಳ ಪಟ್ಟಿ ಕಳಿಸಿದ ನಂತರ ಹೈಕಮಾಂಡ್ ಅಂತಿಮಗೊಳಿಸುತ್ತೆ ಎಂದರು.
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ವಿಚಾರ, ಬರಗಾಲದ ಚರ್ಚೆ ಆಗುತ್ತೆ, ಪ್ರಶ್ನೆಯೆ ಇಲ್ಲ. ತಮ್ಮ ಕ್ಷೇತ್ರದ್ದು ಅಥವಾ ಜಿಲ್ಲೆಯದ್ದು ಚರ್ಚೆ ಮಾಡಿದರೆ ಅದಕ್ಕೆ ಸರ್ಕಾರ ಉತ್ತರ ಕೊಡುತ್ತೆ.
ಮಲೆನಾಡ ಶಾಲಾ ಮಕ್ಕಳ ಅನುಕೂಲಕ್ಕೆ ಕಾಲುಸಂಕ ಅಂತಾ 100 ಕಿರುಸೇತುವೆಗಳನ್ನ ಮಾಡ್ತಾ ಇದ್ದಿವಿ. ಮುಂದಿನ ಎರಡು ವರ್ಷಗಳಲ್ಲಿ ಇನ್ನು 400 ಮಾಡ್ತೇವೆ. ಇದು ನಮ್ಮ ಇಲಾಖೆಯ ಬಹಳ ದೊಡ್ಡ ಸಾಧನೆ. ಲೋಕೋಪಯೋಗಿ ಇಲಾಖೆಯ ಬಿಲ್ ಬಾಕಿ ಇದೆ. ಅದಕ್ಕೆ ನಾವು ಹೊಣೆಗಾರರಲ್ಲ. ಕೊಡುವ ಜವಾಬ್ದಾರಿ ನಮ್ದಿದೆ. ಅದಕ್ಕೆ ನಾವು ಹೊಣೆಗಾರರಲ್ಲ ಕೊಡುತ್ತೇವೆ. 4000 ಕೋಟಿ ಹೆಚ್ಚಿಗೆ ಮಾಡಿಟ್ಟು ಹೋಗಿದ್ದಾರೆ. ಅದಕ್ಕೆ ಎಲ್ಲಿಂದ ತರುವುದು ನಾವು ಎಂದು ಅಸಮಾಧಾನ ಹೊರ ಹಾಕಿದರು.
ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು. ಹೆಚ್ಚಿಗೆ ಕೊಡಿ ಅಂತ ಕೇಳಿದಾಗ ಅದು ಪರಿಹಾರವಾಗುತ್ತೆ. ಲೋಕೋಪಯೋಗಿ ಇಲಾಖೆ ಸಿಬ್ಬಂದಿ ವೇತನ ಆಗ್ತಾ ಇಲ್ಲ ಅಂತ ಯಾರು ಹೇಳಿದರು? ಬೆಳಗಾವಿ ರಾಜಕಾರಣದಲ್ಲಿ ಯಾರು ಮೂಗು ತೂರಿಸುತ್ತಿದ್ದಾರೆ? ನಾವು ಹೊಂದಾಣಿಕೆಯಿಂದ ಇದ್ದೇವೆ. ಮುಂದೆ ಏನಾದರೂ ಕೂಡ ನಾವು ಅದನ್ನ ಚರ್ಚೆ ಮಾಡಿ ಬಗೆಹರಿಸುತ್ತೇವೆ. ಅದರ ಬಗ್ಗೆ ಸಭೆ ಮಾಡಿ ನಾವು ಹೈಕಮಾಂಡ್ಗೆ ಲಿಸ್ಟ್ ಕೊಡ್ತೇವೆ ಎಂದರು.