ಬೆಂಗಳೂರು: ಇಲ್ಲಿನ ಮಲ್ಲೇಶ್ವರಂನಲ್ಲಿರುವ ಶ್ರೀ ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಡಿಸೆಂಬರ್.2ರ ಇಂದಿನಿಂದ ಡಿ.4ರವರೆಗೂ 7ನೇ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ.
ಇಂದು ಬೆಳಗ್ಗೆ 11 ಗಂಟೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕಡಲೆಕಾಯಿ ಪರಿಷೆ ಹಾಗೂ ಹಸಿರು ಚೈತನ್ಯೋತ್ಸವ ಕಾರ್ಯಕ್ರಮದ ಆಡಿಯಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಇಂದಿನ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಚಾಲನಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಕನ್ನಡ ಸಾಹಿಯ್ತ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ, ಸಂಸದ ಡಿ.ವಿ ಸದಾನಂದಗೌಡ, ಶಾಸಕ ಡಾ.ಸಿಎನ್ ಅಶ್ವತ್ಥನಾರಾಯಣ ಮತ್ತಿತರರು ಭಾಗಿಯಾಗಲಿದ್ದಾರೆ.
ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಹಯೋಗದಲ್ಲಿ ಧಾರ್ಮಿಕ ದತ್ತಿ ಇಲಾಖೆ ಪರಿಷೆ ಆಯೋಜಿಸಿದ್ದು, ಇಂದು ಸಂಜೆ 6.30ಕ್ಕೆ ಕೃಷ್ಣ ಲೀಲೆ ಕಂಸವಧೆ ಯಕ್ಷೆಗಾನ ಪ್ರದರ್ಶನ ಕೂಡ ನಡೆಯಲಿದೆ.
ಡಿ.3ರಂದು ಬೆಳಗ್ಗೆ 11.30ಕ್ಕೆ ಪಂಚಮ ಸಂಗೀತ ತಂಡದಿಂದ ಸಂಗೀತ, ಸಂಜೆ ಮಧು ಮನೋಹರ್ ಮತ್ತು ಕಾರ್ತಿಕ್ ಪಾಂಡವಪುರ ತಂಡದಿಂದ ಡಾ.ರಾಜ್ ಕುಮಾರ್ ನೆನಪಿನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.4ರಂದು ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ, ಭವಾನಿ ಗಾನ ವೃಂದದವರಿಂದ ವಿದೂಷಿ ಶೈಲಜ ಶ್ರೀನಾಥ್ ತಂಡದಿಂದ ಶಿವ ವೀಣಾ ಗಾನ ಸಂಗಮ ಏರ್ಪಡಿಸಲಾಗಿದೆ.