ಬೆಳಗಾವಿ: ಚೀನಾದ ಮಕ್ಕಳಲ್ಲಿ ಆರ್ಭಟಿಸುತ್ತಿರುವಂತ ಹೊಸ ಮಾದರಿಯ ವೈರಸ್ ರಾಜ್ಯಕ್ಕೆ ಕಾಲಿಡೋ ಮುನ್ನವೇ ತಡೆಗಟ್ಟೋ ಮುಂಜಾಗ್ರತಾ ಕ್ರಮವನ್ನು ವಹಿಸಲಾಗಿದೆ. ಅದರಲ್ಲಿ ಡಿ.4ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಈ ವೇಳೆ ವೈರಸ್ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಕಂಟ್ರೋಲ್ ರೂಂ ತೆರೆಯಲಾಗಿದೆ.
ಇಂದು ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ಅಧಿವೇಶನದಲ್ಲಿ ಪೊಲೀಸ್ ಕಂಟ್ರೋಲ್ ರೂಂ ಅನ್ನು ಚೀನಾ ಹೊಸ ಮಾದರಿಯ ವೈರಸ್ ವಿಚಾರವಾಗಿ ತೆರಯಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿನ ಯಾವುದೇ ಆತಂಕವಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಒಂದು ಮಿನಿ ಆಸ್ಪತ್ರೆ ಮಾಡಲಾಗಿದೆ. ಚಿಕಿತ್ಸೆಗಾಗಿ ತಾಲ್ಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಬೆಡ್ ವ್ಯವಸ್ಥೆ ಮಾಡಲಾಗಿದೆ. ಶಾಸಕರು, ಸಚಿವರು ತಂಗುವ ಹೋಟೆಲ್ ಗಳಿಗೆ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ ಎಂದರು.
ಪ್ರತಿಯೊಂದು ಹೋಟೆಲ್ ಗಳಿಗೆ ಒಂದೊಂದು ಆಯಂಬುಲೆನ್ಸ್ ಕೂಡ ನಿಯೋಜಿಸಲಾಗಿದೆ. ಸುಮಾರು 16 ವಿಶೇಷ ವೈದ್ಯರ ತಂಡವನ್ನು ರಚನೆ ಮಾಡಿದ್ದೇವೆ. ಅಧಿವೇಶನ ನೋಡಲು ಬರುವ ಮಕ್ಕಳಿಗೆ ಮಿನಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರತೆಗಾಗಿ ನಿಯೋಜನೆಗೊಂಡಿರುವಂತ 2,3000 ಪೊಲೀಸ್ ಸಿಬ್ಬಂದಿಗಳಿಗೆ ಒಂದೇ ಕಡೆಯಲ್ಲಿ ಟೆಂಟ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.