ಧಾರವಾಡ : ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸದಲ್ಲಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.
ಪಾಟೀಲ್ ಅವರು ಇಂದು (ಗುರುವಾರ) ಧಾರವಾಡ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.
ಜಿಲ್ಲಾಸ್ಪತ್ರೆಯ ಔಷಧ ವಿತರಣಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿಗಳು ಔಷಧ ವಿತರಣಾ ವಿಭಾಗದಲ್ಲಿನ ದಾಖಲೆಗಳನ್ನು ಕೇಳಿದರು. ಯಾರಿಗೆ ಎಷ್ಟು ಔಷಧ, ಮಾತ್ರ ಕೊಟ್ಟಿದ್ದೀರಿ ಎಂಬ ಮಾಹಿತಿ ಇದೆಯಾ ಎಂದು ಲೋಕಾಯುಕ್ತರು ಕೇಳಿದಾಗ ಮ್ಯಾನುವಲ್ನಲ್ಲಿ ಮಾತ್ರ ದಾಖಲಿಸಿದ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದರು. ನಂತರ ಆಯಾ ಸಮಯದ ವಿತರಣೆಯನ್ನು ಕಂಪ್ಯೂಟರ್ ನಲ್ಲಿಯೇ ದಾಖಲಿಸುವಂತೆ ಲೋಕಾಯುಕ್ತರು ಸೂಚಿಸಿದರು.
ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗ, ಹೆರಿಗೆ ವಿಭಾಗ ಸೇರಿದಂತೆ ಎಲ್ಲ ವಿಭಾಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಸಮಸ್ಯೆಗಳನ್ನು ಆಲಿಸಿದರು.ಆಸ್ಪತ್ರೆ ಪರಿಶೀಲನೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಧಾರವಾಡ ಜಿಲ್ಲಾಸ್ಪತ್ರೆ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಅದರ ಆಧಾರದ ಮೇಲೆ ನಾವು ದೂರು ದಾಖಲಿಸಿಕೊಂಡು ಪರಿಶೀಲನೆ ಬಂದಿದ್ದೇವೆ.
ಇಲ್ಲಿ ವೈದ್ಯರ ಕೊರತೆ ಇದೆ. ಸ್ಥಳದ ಕೊರತೆ ಇದೆ. ಔಷಧ ವಿತರಣೆ ವ್ಯವಸ್ಥೆ ಸರಿಯಾಗಿ ಇಲ್ಲ. ಸರಿಯಾದ ರಿಜಿಸ್ಟರ್ ನಿರ್ವಹಣೆ ಮಾಡಿಲ್ಲ. ಎಷ್ಟು ಔಷಧ ಬಂದಿದೆ? ಎಷ್ಟು ಔಷಧಿ ವಿತರಣೆಯಾಗಿದೆ? ಎಂಬುದರ ಲೆಕ್ಕ ಇಲ್ಲ.
ಅದರ ಬಗ್ಗೆ ದೂರು ದಾಖಲಿಸಿಕೊಂಡಿದ್ದೇವೆ. 8 ದಿನಗಳ ಒಳಗೆ ಇದು ಸರಿಯಾಗಬೇಕು. 8 ದಿನಗಳ ಬಳಿಕ ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ನಮ್ಮ ಎಸ್ಪಿಗೆ ಸೂಚಿಸಿದ್ದೇವೆ. ನಾವು ನೋಡಿದ ಕುಂದು ಕೊರತೆ ಎಲ್ಲ ಸರಿಯಾಗಬೇಕು. ಇಲ್ಲದೇ ಹೋದಲ್ಲಿ ಗಂಭೀರವಾಗಿ ತೆಗೆದುಕೊಳ್ಳಿತ್ತೇವೆ ಎಂದು ಎಚ್ಚರಿಕೆ ನೀಡಿದರು.