ಬೆಂಗಳೂರು: ಆಧುನಿಕ ಯುಗದಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವ ಕುರಿತು ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಸಾರ್ವಜನಿಕ ಸ್ಥಳದಂತಿರುವ ದೇವಾಲಯಕ್ಕೆ ದಲಿತ ಕುಟುಂಬ ಪ್ರವೇಶಕ್ಕೆ ಅಡ್ಡಿಪಡಿಸಿ, ಜಾತಿ ಹೆಸರಿನಲ್ಲಿ ನಿಂದಿಸಿ ಹಲ್ಲೆ ನಡೆಸಿದ ಆರೋಪದಲ್ಲಿ ಎಂಟು ಮಂದಿಯ ವಿರುದ್ಧದ ಪ್ರಕರಣ ರದ್ದುಗೊಳಿಸಲು ನಿರಾಕರಿಸಿತು.
ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸುವಂತೆ ಕೋರಿ ಪಾಂಡುರಗ ಭಟ್ ಸೇರಿದಂತೆ ಇತರೆ ಏಳು ಮಂದಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪಪೀಠ, ಈ ಆದೇಶ ನೀಡಿದೆ. ದೇವಾಲಯ ಏಕತೆ ಮತ್ತು ಎಲ್ಲರೂ ಒಳ್ಳಗೊಳ್ಳುವಿಕೆಯ ಸಂಕೇತ. ಅಸ್ಪೃಶ್ಯತೆ ಆಚರಣೆ ಸಾಂವಿಧಾನಬಾಹಿರ ಎಂದು ತಿಳಿಸಿದ್ದೂ, ಗ್ರಾಮೀಣ ಭಾಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ದೇವಾಲಯ ಪ್ರವೇಶ ಮತ್ತು ಪೂಜೆಗೆ ನಿರಾಕರಿಸಿ ಅಡ್ಡಿ ಪಡಿಸುವ ಪ್ರಕ್ರಿಯೆ ಮುಂದುವರೆದಿರುವುದು ದುರುದೃಷ್ಟಕರ ಎಂದು ಪೀಠ ತಿಳಿಸಿದೆ.
ಪ್ರಕರಣದಲ್ಲಿ ದೂರುದಾರರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣದಿಂದ ಅರ್ಜಿದಾರರು ದೇವಾಲಯಕ್ಕೆ ಪ್ರವೇಶಕ್ಕೆ ನಿರಾಕರಿಸಿರುವ ವರ್ತನೆ ಪ್ರತಿಗಾಮಿ ನಡೆ. ಈ ರೀತಿಯ ಬೆಳವಣಿಗೆ ನಡೆಯುತ್ತಿರುವುದು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುತ್ತದೆ. ಮನುಷ್ಯರು ಮನುಷ್ಯರಂತೆ ನಡೆದುಕೊಳ್ಳಬೇಕು. ಈ ರೀತಿಯ ತಾರತಮ್ಯ ತಕ್ಷಣ ನಿಲ್ಲುವಂತಾಗಬೇಕು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿತು.
ದೂರುದಾರರ ವಾದವನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ನ್ಯಾಯಪೀಠ, ದೇವಾಲಯದ ಹೊರಭಾಗವೂ ಸಾರ್ವಜನಿಕ ಸ್ಥಳವಾಗಿದೆ. ದೂರುದಾರರು ಮತ್ತವರ ಕಟುಂಬಸ್ಥರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಗೊತ್ತಾಗಿರುವುದರಿಂದಲೇ ಅವರನ್ನು ಅವಮಾನಿಸುವುದಕ್ಕಾಗಿ ದೇವಾಲಯ ಪ್ರವೇಶಕ್ಕೆ ತಡೆಹಿಡಿದಿದ್ದಾರೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, 2016ರಲ್ಲಿ ಪ್ರಕರಣ ನಡೆದಿದ್ದು, ಸುಮಾರು 8 ವರ್ಷಗಳೇ ಕಳೆದಿವೆ. ಆದ್ದರಿಂದ ವಿಚಾರಣಾ ನ್ಯಾಯಾಲಯ ಮುಂದಿನ ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿ ಹೈಕೋರ್ಟ್ ಪೀಠ ಆದೇಶಿಸಿದೆ.