ವಿಶಾಖಪಟ್ಟಣ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಟಿ20 ಸರಣಿಯ ಮೊದಲ ಪಂದ್ಯದ ಫಸ್ಟ್ ಇನ್ನಿಂಗ್ಸ್ ಮುಕ್ತಾಯಗೊಂಡಿದ್ದು, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸೀಸ್ ಜೋಶ್ ಇಂಗ್ಲಿಸ್ ಅವರ ಶತಕದ ನೆರವಿನಿಂದ ನಿಗದಿತ ಓವರ್ಗಳ ಅಂತ್ಯಕೆ 3 ವಿಕೆಟ್ ನಷ್ಟಕ್ಕೆ 208 ರನ್ಗಳ ಕಲೆ ಹಾಕಿದ್ದು, ಭಾರತಕ್ಕೆ 209 ರನ್ ಗುರಿ ನೀಡಿದೆ.
ವಿಶಾಖಪಟ್ಟಣದ ಡಾ. ವೈ.ಎಸ್. ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲಿಗೆ ಬೌಲಿಂಗ್ ಆಯ್ದುಕೊಂಡು, ಆಸೀಸ್ಗೆ ಬ್ಯಾಟಿಂಗ್ಗೆ ಆಹ್ವಾನಿಸಿತು. ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಎಡವಿದ ಟೀಮ್ ಇಂಡಿಯಾ ಕಾಂಗರೂ ಬ್ಯಾಟರ್ಗಳಿಗೆ ಸುಲಭವಾಗಿ ರನ್ಗಳ ಬಿಟ್ಟುಕೊಟ್ಟಿತು. ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ (54) ಅರ್ಧ ಶತಕ ಸಿಡಿಸಿದರೆ, ಜೋಶ್ ಇಂಗ್ಲಿಸ್(110) ಶತಕ ಸಿಡಿಸಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಶಾರ್ಟ್ (13), ಸ್ಟೋಯಿನಿಸ್ (7 ಅಜೇಯ), ಟಿಮ್ ಡೇವಿಡ್ (19 ಅಜೇಯ) ಅಲ್ಪ ಮೊತ್ತದ ಸ್ಕೋರ್ ಕಲೆ ಹಾಕುವ ಮೂಲಕ ತಂಡದ ಸ್ಕೋರ್ 200ರ ಗಡಿ ದಾಟಲು ಸಹಾಯ ಮಾಡಿದರು.
ಭಾರತದ ಪರ ಪ್ರಸಿದ್ಧ ಕೃಷ್ಣ, ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ ಪಡೆದರು.
ಟೀಂ ಇಂಡಿಯಾದ ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆಸ್ಟ್ರೇಲಿಯಾ ಕೂಡ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದೆ. ಮ್ಯಾಥ್ಯೂ ವೇಡ್ ನಾಯಕತ್ವದಲ್ಲಿ ಕಣಕ್ಕಿಳಿದಿದೆ. ಭಾರತ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ, ಗೆದ್ದ ಆಸೀಸ್ ಪೈಪೋಟಿ ನೀಡುವ ಉತ್ಸಾಹದಲ್ಲಿದೆ.
ತಂಡಗಳು ಭಾರತ: ರುತುರಾಜ್ ಗಾಯಕ್ವಾಡ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ (ವಿ. ಕೀ), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಮುಖೇಶ್ ಕುಮಾರ್
ಆಸ್ಟ್ರೇಲಿಯಾ: ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್ (ವಿ.ಕೀ), ಆರನ್ ಹಾರ್ಡಿ, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿ.ಕೀ, ನಾಯಕ), ಸೀನ್ ಅಬಾಟ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್‌ಡಾರ್ಫ್, ತನ್ವಿರ್ ಸಾಂಘಾ