ಮುಂಬೈ(ಮಹಾರಾಷ್ಟ್ರ): ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದ ವೇಳೆ ಬಿಸಿಸಿಐ ಕೊನೆಯ ಕ್ಷಣದಲ್ಲಿ ಪಿಚ್ ಬದಲಾಯಿಸಿದೆ ಎಂದು ಕೆಲ ಆಂಗ್ಲ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಈ ಬಗ್ಗೆ ಐಸಿಸಿ ಈಗಾಗಲೇ ವಿವರಣೆ ನೀಡಿದೆ. ಇತ್ತೀಚೆಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೂಡ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ಭಾರತ ಮತ್ತು ಕಿವೀಸ್ ನಡುವೆ ಮೊದಲ ಸೆಮಿಫೈನಲ್ ನಡೆಯಿತು. ಪಂದ್ಯದ ನಂತರ ನಡೆದ ಮಾಧ್ಯಮಗೋಷ್ಟಿಯಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ‘ಪಿಚ್ ವಿವಾದ’ವನ್ನು ತಳ್ಳಿಹಾಕಿದ್ದಾರೆ.
ಈ ಪಿಚ್‌ನಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಈ ಪಿಚ್ ಅನ್ನು ಪಂದ್ಯಗಳಿಗೆ ಬಳಸಲಾಗುತ್ತದೆ. ಇನ್ನೂ ತುಂಬಾ ಚೆನ್ನಾಗಿದೆ. ಎರಡೂ ತಂಡಗಳಿಗೆ ಅನುಕೂಲವಾಗಿಯೇ ಈ ಪಿಚ್ ಕಾರ್ಯನಿರ್ವಹಿಸಿದೆ. ಮೊದಲಾರ್ಧದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ರನ್ ಗಳಿಸಿದರು. ಪರಿಸ್ಥಿತಿಗೆ ತಕ್ಕಂತೆ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಂಡಂತಿದೆ. ಆದರೆ, ನಾಕೌಟ್ ಹಂತದಲ್ಲಿ ಈ ರೀತಿ ಮನೆಗೆ ಹೋಗ್ತಿರುವುದು ಬೇಸರ ತಂದಿದೆ ಎಂದರು.
ಕಳೆದ ಏಳು ವಾರಗಳಲ್ಲಿ ನಾವು ಅದ್ಭುತ ಪ್ರಯಾಣ ಮಾಡಿದ್ದೇವೆ. ಸಣ್ಣ ಪುಟ್ಟ ನೆನಪುಗಳು ಅಳಿಸಿ ಹೋಗದಂತೆ ಉಳಿಯುತ್ತವೆ. ಮೇಲಾಗಿ ಅತ್ಯುತ್ತಮ ತಂಡದ ಎದುರು ಸೋತು ಟೂರ್ನಿಯಿಂದ ನಿರ್ಗಮಿಸುತ್ತಿದ್ದೇವೆ. ಸದ್ಯ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ ಎಂದರು