ಬೆಂಗಳೂರು : ಯಡಿಯೂರಪ್ಪರನ್ನು ಬಳಸಿಕೊಳ್ಳಲು ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ನಾಯಕರು ನಾಟಕವಾಡ್ತಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಬಿ.ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ರಾಜ್ಯಾಧ್ಯಕ್ಷರು ಇದ್ದರು.
ನಾವು ಕೇಳಿದ್ದು ವಿಪಕ್ಷ ನಾಯಕನನ್ನು. ಆದರೆ, ಹೊಸ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಅದು ಅವರ ಪಕ್ಷದ ಆಂತರಿಕ ವಿಚಾರ. ಈ ಹಿಂದೆ ಲಿಂಗಾಯತರೇ ರಾಜ್ಯದ ಸಿಎಂ ಆಗಿದ್ದರು. ಯಡಿಯೂರಪ್ಪ ಬಳಿಕ, ಬೊಮ್ಮಾಯಿ ಸಿಎಂ ಆಗಿದ್ದರು. ಬೊಮ್ಮಾಯಿ ಸಿಎಂ ಆಗಿದ್ದಾಗಲೇ ಕಾಂಗ್ರೆಸ್ 136 ಸ್ಥಾನ ಪಡೆದಿದೆ. ಲಿಂಗಾಯತರು ಹೋದ ಚುನಾವಣೆಯಲ್ಲಿ ಪಕ್ಷವನ್ನು ಕೈ ಬಿಟ್ರು ಎಂದು ಅರ್ಥೈಸಿಕೊಂಡು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿರಬೇಕು. ಲೋಕಸಭೆ ಚುನಾವಣೆಗಾಗಿ ವಿಜಯೇಂದ್ರರನ್ನು ಆಯ್ಕೆ ಮಾಡಿದ್ದಾರೆ ಎಂದರು.
ವಿಜಯೇಂದ್ರ ಅವರಿಗಿಂತ ಅವರ ತಂದೆ ಯಡಿಯೂರಪ್ಪರನ್ನು ಬಳಸಿಕೊಳ್ಳಲು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿರಬಹುದು. ಆದರೆ, ಯಾವುದೂ ನಡೆಯಲ್ಲ. ಲೋಕಸಭೆ ಚುನಾವಣೆ ಬಳಿಕ ಯಡಿಯೂರಪ್ಪ ಅವರ ಪರಿಸ್ಥಿತಿ ಯಥಾಸ್ಥಿತಿಯಲ್ಲಿ ಇರುತ್ತದೆ. ಯಡಿಯೂರಪ್ಪನವರಿಗೆ ಬಿಜೆಪಿಯವರು ಎರಡನೇ ಅವಧಿ ಪೂರೈಸಲು ಬಿಡಲಿಲ್ಲ. ಈಗ ಲೋಕಸಭೆ ಚುನಾವಣೆ ಬಂದಿದೆ. ಅವರ ಬಾಲದ ಬುಡಕ್ಕೆ ಬೆಂಕಿ ಹತ್ತಿದೆ. ಹಾಗಾಗಿ, ರಾಜ್ಯಾಧ್ಯಕ್ಷ ಸ್ಥಾನ ಮಗನಿಗೆ ಕೊಟ್ಟರೆ ಯಡಿಯೂರಪ್ಪ ಓಡಾಡಿ ಕೆಲಸ ಮಾಡ್ತಾರೆ ಎಂದು ಕೊಟ್ಟಿರಬೇಕು. ಆದರೆ, ಅದು ಯಾವುದೂ ವರ್ಕೌಟ್ ಆಗಲ್ಲ ಎಂದು ಹೇಳಿದರು.