ಚಿಕ್ಕಮಗಳೂರು: ಮಗಳು ಸ್ನಾನ ಮಾಡುತ್ತಿರುವ ಫೋಟೋ ತೆಗೆದು, ವಿಡಿಯೋ ಮಾಡಿ, ಹೆತ್ತ ಅಪ್ಪನೇ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ಮನನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಜಗಳದಿಂದ ಯುವತಿಯ ಅಮ್ಮ ಬೇರೆಡೆ ವಾಸವಿದ್ದಳು. ಅಪ್ಪ-ಮಗಳು ಒಂದೇ ಮನೆಯಲ್ಲಿ ವಾಸವಿದ್ದರು. ಈ ವೇಳೆ 40 ವರ್ಷದ ಪಾಪಿ ಅಪ್ಪ ತಾನೇ ಸಾಕಿದ 18 ವರ್ಷದ ಮಗಳು ಸ್ನಾನ ಮಾಡುವ ವಿಡಿಯೋ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ತಂದೆಯ ವರ್ತನೆಗೆ ಬೇಸತ್ತ ಮಗಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ತಂದೆಯ ಕಿರುಕುಳದಿಂದ ಬೇಸತ್ತು ಮೇ.20ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದನ್ನು ಗಮನಿಸಿದ ಸ್ಥಳೀಯರು ಯುವತಿಯನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಂಜೆ ಯುವತಿ ಮೃತಪಟ್ಟಿದ್ದಾಳೆ.

ಪಾಪಿ ಅಪ್ಪನ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕರೋನಾ ಪರೀಕ್ಷೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Laxmi News 24×7