ಹುಬ್ಬಳ್ಳಿ: ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ನಡೆದಿದೆ.
ರಾಜ್ಯದಲ್ಲಿ ಬರ ತಾಂಡವಾಡುತ್ತಿದ್ದು, ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ಸಾಲ ವಸೂಲಿ ಮಾಡಲು ಬ್ಯಾಂಕ್ವೊಂದರ ಮ್ಯಾನೇಜರ್ ರೈತನಿಗೆ ನಿರಂತರ ಕಿರುಕುಳ ನೀಡಿರುವುದೇ ಆತ್ಮಹತ್ಯೆಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.
ಮಹಾದೇವಪ್ಪ ಫಕೀರಪ್ಪ ಜಾವೂರ್ (75) ಎಂಬಾತ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಈತ ನಿನ್ನೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಮೃತ ರೈತ 19 ಎಕರೆ 16 ಗುಂಟಾ ಕೃಷಿ ಜಮೀನನ್ನು ಹೊಂದಿದ್ದು, 2015 ರಲ್ಲಿ ಮೊರಬ ಗ್ರಾಮದಲ್ಲಿರುವ ಬ್ಯಾಂಕ್ ಒಂದರಿಂದ 14 ಲಕ್ಷ 50 ಸಾವಿರ ರೂ ಬೆಳೆ ಸಾಲ ತೆಗೆದುಕೊಂಡಿದ್ದನು. ಅದಲ್ಲದೇ 2017 ರವರೆಗೆ ಸುಮಾರು ಎರಡು ವರ್ಷಗಳ ಕಾಲ ಬೆಳೆ ಸಾಲ ರಿನೀವಲ್ ಕೂಡ ಮಾಡಿದ್ದನು. 2017 ರಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಸಾಲ ಮರು ಪಾವತಿಯಾಗಿರಲಿಲ್ಲ. ಆದರೆ, ಬರಗಾಲದ ನಡುವೆಯೇ ಬ್ಯಾಂಕ್ ಮ್ಯಾನೇಜರ್ ಸಾಲ ವಸೂಲಿಗೆ ಬಂದಿದ್ದರು. ಇದರಿಂದ ಹೆದರಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಮಗ ಆರೋಪಿಸಿದ್ದಾರೆ.
“ನಮ್ಮ ತಂದೆ ಗ್ರಾಮದಲ್ಲಿ ಗೌರವಯುತವಾಗಿ ಬಾಳಿದವರು, ಸ್ವಾಭಿಮಾನಿಯಾಗಿದ್ದರು. ಆದರೆ ಬ್ಯಾಂಕ್ ಮ್ಯಾನೇಜರ್ ನನಗೆ ಯಾವಾಗಲೂ ಫೋನ್ ಕರೆ ಮಾಡಿ ಸಾಲದ ಬಗ್ಗೆ ವಿಚಾರಿಸುತ್ತಿದ್ದರು. ಆದರೆ, ಈ ಬಾರಿ ಏಕಾಏಕಿಯಾಗಿ ಗ್ರಾಮಕ್ಕೆ ಬಂದು ಸಾರ್ವಜನಿಕವಾಗಿ ನಮ್ಮ ತಂದೆಯ ಮಾನ ಹರಾಜು ಹಾಕಿದ್ದಾರೆ. ಇದರಿಂದ ನೊಂದು ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ನಾನು ಆಸ್ತಿ ಮಾರಾಟ ಮಾಡಿ ಸಾಲ ತೀರಿಸುತ್ತೇನೆ. ನಮ್ಮ ತಂದೆಯ ಜೀವ ತಂದು ಕೊಡಿ” ಎಂದು ಪುತ್ರ ಫಕೀರಪ್ಪ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನವಲಗುಂದ ತಹಶೀಲ್ದಾರ್ ಸುಧೀರ ಸಾಹುಕಾರ ಅವರು, “ರೈತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನನ್ನ ಸಂತಾಪವಿದೆ. ಆದರೆ, ಬರಗಾಲದ ಸಂದರ್ಭದಲ್ಲಿ ಸಾಲ ವಸೂಲಾತಿಗೆ ಸರ್ಕಾರದ ನಿರ್ದೇಶನವಿಲ್ಲ. ಆದರೂ ಈ ಅವಘಡ ಸಂಭವಿಸಿದೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ. ಮೃತ ರೈತ ಕುಟುಂಬಕ್ಕೆ ಪರಿಹಾರದ ಜೊತೆಗೆ ಒನ್ ಟೈಂ ಸೆಟ್ಲ್ಮೆಂಟ್ ಬಗ್ಗೆ ಚರ್ಚಿಸಲಾಗುತ್ತಿದೆ” ಎಂದರು.
“ಘಟನೆಗೆ ಕಾರಣವಾಗಿರುವ ಬ್ಯಾಂಕ್ ಮ್ಯಾನೇಜರ್ ಅವರನ್ನು ಬಂಧಿಸಲಾಗಿದೆ. ಇಂತಹ ಘಟನೆಗಳು ಮುಂದೆ ನಡೆಯದಂತೆ ಲೀಡ್ ಬ್ಯಾಂಕ್ ಮ್ಯಾನೇಜರ್ಗಳಿಗೆ ಸೂಚನೆ ನೀಡಲಾಗುವುದು. ಈ ರೀತಿ ಆಗದಂತೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಲಿದೆ” ಎಂದು ಭರವಸೆ ನೀಡಿದರು.