ಬೆಂಗಳೂರು : ಕೆಲಸಕ್ಕಾಗಿ ಲಂಚ ಪಡೆದ ಆರೋಪಗಳ ಬಗ್ಗೆ ತನಿಖೆ ನಡೆಸಿದ ನಂತರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 16 ಉದ್ಯೋಗಿಗಳನ್ನು ವಜಾಗೊಳಿಸಿದೆ ಮತ್ತು ಆರು ಸಿಬ್ಬಂದಿ ನೇಮಕಾತಿ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ.
ಈ ಬಗ್ಗೆ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ಮಾಹಿತಿ ನೀಡಿರುವ ಕಂಪನಿ, “ತನಿಖೆಯಲ್ಲಿ 19 ಉದ್ಯೋಗಿಗಳು ಲಂಚ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಮತ್ತು ಇಲ್ಲಿ ವಿವರಿಸಿದಂತೆ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಕಂಪನಿಯ ನಿಯಮಾವಳಿಗಳ ಉಲ್ಲಂಘನೆಗಾಗಿ 16 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಮತ್ತು ಮೂವರು ಉದ್ಯೋಗಿಗಳನ್ನು ಸಂಪನ್ಮೂಲ ನಿರ್ವಹಣಾ ಕಾರ್ಯದಿಂದ ತೆಗೆದುಹಾಕಲಾಗಿದೆ” ಎಂದು ಹೇಳಿದೆ.
ಇದರ ಜೊತೆಗೆ ಆರು ವ್ಯಾಪಾರಿ ಘಟಕಗಳು, ಅವುಗಳ ಮಾಲೀಕರು ಮತ್ತು ಅಂಗಸಂಸ್ಥೆಗಳು ಇನ್ನು ಮುಂದೆ ಟಿಸಿಎಸ್ನೊಂದಿಗೆ ಯಾವುದೇ ವ್ಯವಹಾರ ನಡೆಸದಂತೆ ನಿರ್ಬಂಧಿಸಲಾಗಿದೆ.
ಇದಲ್ಲದೇ, ಟಿಸಿಎಸ್ ತನ್ನ ಆಡಳಿತ ಕ್ರಮಗಳಲ್ಲಿ ಸುಧಾರಣೆ ತರುವುದನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದು, ಇದರಲ್ಲಿ ಎ) ಸಂಪನ್ಮೂಲ ನಿರ್ವಹಣಾ ಕಾರ್ಯದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಸಿಬ್ಬಂದಿಯ ನಿಯಮಿತ ವರ್ಗಾವಣೆ, ಬಿ) ಪೂರೈಕೆದಾರರ ನಿರ್ವಹಣೆಯ ಬಗ್ಗೆ ವರ್ಧಿತ ವಿಶ್ಲೇಷಣೆ, ಸಿ) ಟಾಟಾ ನೀತಿ ಸಂಹಿತೆಯ ಅನುಸರಣೆಯ ಬಗ್ಗೆ ಮಾರಾಟಗಾರರಿಂದ ನಿಯತಕಾಲಿಕ ಘೋಷಣೆಗಳು ಮತ್ತು ಹೆಚ್ಚುವರಿ ಘೋಷಣೆಗಳನ್ನು ಒಳಗೊಳ್ಳಲು ಪೂರೈಕೆದಾರರ ಪ್ರಕ್ರಿಯೆಯನ್ನು ತಿಳಿದುಕೊಳ್ಳುವುದು ಮತ್ತು ಡಿ) ಮಾರಾಟಗಾರರ ನಿರ್ವಹಣಾ ಪ್ರಕ್ರಿಯೆ ಲೆಕ್ಕಪರಿಶೋಧನೆಗಳು ಸೇರಿವೆ.
ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಕೆ. ಕೃತಿವಾಸನ್, ನಾವು ನಮ್ಮ ತನಿಖೆಯನ್ನು ಪೂರ್ಣಗೊಳಿಸಿದ್ದೇವೆ. ನೀತಿ ಸಂಹಿತೆಯನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದೇವೆ. ಈ ಬಗ್ಗೆ ಎಲ್ಲ ಕ್ರಮಗಳನ್ನು ಕೈಗೊಂಡು ಪ್ರಕರಣವನ್ನು ಮುಕ್ತಾಯಗೊಳಿಸಿದ್ದೇವೆ ಎಂದು ಹೇಳಿದ್ದರು.
ಟಾಟಾ ಗ್ರೂಪ್ ಸಂಸ್ಥೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಬಹುಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ಜೂನ್ನಲ್ಲಿ ಆರೋಪಗಳು ಕೇಳಿ ಬಂದಿದ್ದವು. ಟಿಸಿಎಸ್ನ ಕೆಲ ಉದ್ಯೋಗಿಗಳು ಸಿಬ್ಬಂದಿ ನೇಮಕಾತಿ ಕಂಪನಿಗಳಿಂದ ಲಂಚ ಸ್ವೀಕರಿಸಿದ್ದಾರೆ ಮತ್ತು ನೇಮಕಾತಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.
ವರದಿಗಳ ಪ್ರಕಾರ, ಈ ನೇಮಕಾತಿ ಹಗರಣ ಕೆಲ ಕಾಲದವರೆಗೆ ಮುಂದುವರೆದಿತ್ತು ಮತ್ತು ಇದರಲ್ಲಿ 100 ಕೋಟಿ ರೂಪಾಯಿ ಲಂಚದ ವಹಿವಾಟು ನಡೆದಿತ್ತು. ಇದರ ನಂತರ ಕಂಪನಿಯು ತನ್ನ ಮಾನವ ಸಂಪನ್ಮೂಲ ನಿರ್ವಹಣಾ ವಿಭಾಗದಿಂದ ನಾಲ್ವರು ಅಧಿಕಾರಿಗಳನ್ನು ವಜಾಗೊಳಿಸಿ, ಮೂರು ಸಿಬ್ಬಂದಿ ನೇಮಕಾತಿ ಸಂಸ್ಥೆಗಳನ್ನು ನಿಷೇಧಿಸಿತ್ತು.
Laxmi News 24×7