ಬೆಳಗಾವಿ : ರಾಜ್ಯದಲ್ಲಿ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಸಂಭವಿಸುತ್ತಿದ್ದು, ರಾತ್ರಿ ಹೊತ್ತು ಕರೆಂಟ್ ಇಲ್ಲದೆ ಜನರು ಹಾಗೂ ಬೆಳೆಗಳಿಗೆ ನೀರು ಹಾಯಿಸಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಬಿಜೆಪಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೇ ವಿಚಾರವನ್ನಿಟ್ಟುಕೊಂಡು ಕೆಸರೆರಚಾಟ ನಡೆಸುತ್ತಿವೆ.
ಈ ಕುರಿತು ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ರಾಜ್ಯ ಬಿಜೆಪಿ, ‘ಡಿಯರ್ ಕಾಂಗ್ರೆಸ್, ಕಾಣೆಯಾಗಿದ್ದ ಬಸ್ ಸ್ಟಾಂಡನ್ನು ಕೊನೆಗೂ ಹುಡುಕಿದ್ದೇವೆ ಎಂದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ, ಇರಲಿ ನಿಮ್ಮ ಸಾಹಸ ನಿಜಕ್ಕೂ ಶ್ಲಾಘನೀಯ! ಕರ್ನಾಟಕದಲ್ಲೆಲ್ಲಾ ಕತ್ತಲೆ ಹರಡಿ ನಾಪತ್ತೆಯಾಗಿರುವ ನಿಮ್ಮ ಇಂಧನ ಸಚಿವ ಕೆ. ಜೆ. ಜಾರ್ಜ್ ಅವರನ್ನು ಹುಡುಕಿ ಕೊಡಿ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ಹುಡುಕಿಕೊಟ್ಟವರಿಗೆ ಸಿಂಗಲ್ ಫೇಸ್ ವಿದ್ಯುತ್ ಉಚಿತ, ಖಚಿತ, ನಿಶ್ಚಿತ’ ಎಂದು ಲೇವಡಿ ಮಾಡಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಕರುನಾಡಿಗೆ ಕತ್ತಲೆಯ ಗ್ಯಾರಂಟಿ ಕೊಟ್ಟಿದೆ. ಎಲ್ಲಿ ನೋಡಿದರೂ ಪವರ್ ಕಟ್..! ನ್ಯಾಯಾಲಯದಲ್ಲೂ ಪವರ್ ಕಟ್..! ವಿಧಾನಸೌಧದಲ್ಲೂ ಪವರ್ ಕಟ್, ಶಾಸಕರ ಸಭೆಯಲ್ಲೂ ಪವರ್ ಕಟ್, ರೈತರ ಪಂಪ್‌ಸೆಟ್‌ಗಳಿಗೂ ಪವರ್ ಕಟ್, ಸ್ಕೂಲ್, ಕಾಲೇಜುಗಳಲ್ಲೂ ಪವರ್ ಕಟ್. ಕಂಪನಿ, ಕೈಗಾರಿಕೆಗಳಲ್ಲೂ ಪವರ್ ಕಟ್, ಗ್ರಾಮೀಣ ಪ್ರದೇಶದಲ್ಲೂ ಪವರ್ ಕಟ್. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಕೆ. ಜೆ. ಜಾರ್ಜ್ ಅವರೇ, ನಿಮ್ಮ ಮನೆಯಲ್ಲಿ ಜನರೇಟರ್ ಇದೆಯೋ ಅಥವಾ ಸೀಮೆಎಣ್ಣೆ ಬುಡ್ಡಿ ಹಚ್ಚುತ್ತಿದ್ದೀರೋ’ ಎಂದು ಬಿಜೆಪಿ ಪ್ರಶ್ನಿಸಿದೆ.