ಬೆಂಗಳೂರು : ಲೈಂಗಿಕ ದೌರ್ಜನ್ಯ ಸಂಬಂಧ ಪ್ರತ್ಯೇಕ ಮೂರು ಪೊಕ್ಸೋ ಪ್ರಕರಣಗಳಲ್ಲಿ ಮೂವರು ಅಪರಾಧಿಗಳಿಗೆ ತ್ವರಿತಗತಿ ವಿಶೇಷ ನ್ಯಾಯಾಲಯ (ಎಫ್ಟಿಎಸ್ಸಿ) ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತು.
ನ್ಯಾಯಾಧೀಶರಾದ ಕೆ.ಎನ್.ರೂಪ ಅವರು ಅಪರಾಧಿಗಳಾದ ಬಾಬು, ದಿವಾಕರ ಹಾಗೂ ಚಿದಾನಂದ ಎಂಬವರಿಗೆ ಜೈಲುಶಿಕ್ಷೆ ವಿಧಿಸಿದರು.
ಮಾರತ್ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಬೀಸನಹಳ್ಳಿ ನಿವಾಸಿ ಬಾಬು ಎಂಬಾತನಿಗೆ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಲಾಗಿದೆ. ಬಾಬು ತಮಿಳುನಾಡು ಮೂಲದವನಾಗಿದ್ದು, ನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ದೇವರಬೀಸನಹಳ್ಳಿಯಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದನು. ಮನೆಯ ಪಕ್ಕದಲ್ಲಿ ಮೂರು ವರ್ಷದ ಮಗುವಿನ ಕುಟುಂಬ ವಾಸವಾಗಿತ್ತು. ಮಗುವಿನ ಪೋಷಕರು ಕೆಲಸಕ್ಕೆಂದು ಹೋಗಿದ್ದಾಗ ಚಾಕಲೇಟ್ ಕೊಡಿಸುವುದಾಗಿ ಆಮಿಷವೊಡ್ಡಿ ತಮ್ಮ ಮನೆಗೆ ಕರೆದೊಯ್ದಿದ್ದ. ಬಳಿಕ ಲೈಂಗಿಕ ದೌರ್ಜನ್ಯವೆಸಗಿದ್ದನು.
ಈ ಕುರಿತು ಪೋಷಕರು ಮಾರತಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆಯ ಬಳಿಕ ಆರೋಪಿ ಕೃತ್ಯವೆಸಗಿರುವುದು ಸಾಬೀತಾಗಿದ್ದು ಅಪರಾಧಿಗೆ ಜೈಲು ಶಿಕ್ಷೆಸಮೇತ ದಂಡ ವಿಧಿಸಲಾಗಿದೆ.
ಐಸ್ ಕ್ರೀಂ ತರಲು ತಮ್ಮನನ್ನು ಕಳುಹಿಸಿ ಅಕ್ಕನ ಮೇಲೆ ಲೈಂಗಿಕ ದೌರ್ಜನ್ಯ: ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ 9 ವರ್ಷದ ಬಾಲಕಿಯ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಅಪರಾಧಿಗೆ ಕೋರ್ಟ್, 3 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ ದಂಡ ವಿಧಿಸಿದೆ.
ಅಪರಾಧಿಯು ಬಾಲಕಿಯ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ, ಆಕೆಯ ತಮ್ಮನಿಗೆ ನಾನು ನಿಮ್ಮ ತಂದೆಯ ಸ್ನೇಹಿತ, ನಿಮಗೆ ತಿನ್ನಲು ತಿಂಡಿ ತಂದಿಲ್ಲ ಎಂದು ಹೇಳಿ, ಆತನಿಗೆ 20 ರೂಪಾಯಿ ಕೊಟ್ಟು ಐಸ್‌ಕ್ರೀಂ ತರಲು ಅಂಗಡಿಗೆ ಕಳುಹಿಸಿದ್ದ. ಬಳಿಕ ಮಲಗುವ ಕೋಣೆಗೆ ಬಾಲಕಿಯನ್ನು ಕರೆದೊಯ್ದು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನೋವಿನಿಂದ ಬಾಲಕಿ ಕಿರುಚಿಕೊಂಡಿದ್ದಳು. ಇದೇ ವೇಳೆ ಅಂಗಡಿಗೆ ಹೋಗಿದ್ದ ಆಕೆಯ ತಮ್ಮ ವಾಪಸ್ ಬಂದಿದ್ದರಿಂದ ಆರೋಪಿಯು ಮನೆಯಿಂದ ಎಸ್ಕೇಪ್ ಆಗಿದ್ದ.
ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದು ರಾಜಗೋಪಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ಅಂದಿನ ತನಿಖಾಧಿಕಾರಿ ಮಿಥುನ್ ಶಿಲ್ಪಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಒಟ್ಟು 19 ಜನ ಸಾಕ್ಷಿದಾರರನ್ನು ವಿಚಾರಣೆ ಮಾಡಿದ್ದು, ಇಂದು ನ್ಯಾಯಾಧೀಶೆ ರೂಪ.ಕೆ.ಎನ್ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.