ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಗೆ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ.
‘ಬಿಗ್ ಬಾಸ್’.. ಕನ್ನಡದ ಜನಪ್ರಿಯ ರಿಯಾಲಿಟಿ ಶೋನ 10ನೇ ಸೀಸನ್ ಭಾನುವಾರದಿಂದ ಆರಂಭವಾಗಿದೆ. ಕಿಚ್ಚ ಸುದೀಪ್ ಸಾರಥ್ಯದ 100 ದಿನಗಳ ಕಾರ್ಯಕ್ರಮವು ನಿನ್ನೆ ಗ್ರ್ಯಾಂಡ್ ಲಾಂಚ್ ಆಗಿದೆ.
ಈ ವೇಳೆಯೇ ಕಲರ್ಫುಲ್ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಪ್ರವೇಶಿಸಿದ್ದಾರೆ. ಇದೀಗ ಒಂದು ದಿನ ತಡವಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಗೆ ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ. ಡೊಳ್ಳು ಕುಣಿತದ ಮೂಲಕ ಅವರನ್ನು ಬಿಗ್ ಬಾಸ್ ಮನೆಗೆ ಸ್ವಾಗತಿಸಲಾಗಿದೆ.
“ಕಲರ್ಫುಲ್ ಮನೆಗೆ ತಾಳ್ಮೆಯ ಬಿಳುಪು; ಎಂಟ್ರೀ ಕೊಟ್ರು ಎಮ್.ಎಲ್.ಎ ಪ್ರದೀಪು!” ಎಂಬ ಶೀರ್ಷಿಕೆಯೊಂದಿಗೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಎಂಎಲ್ಎ ಸಡನ್ ಎಂಟ್ರಿ ಕಂಡು ದೊಡ್ಮನೆ ಸ್ಪರ್ಧಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ನಾನು ನಿನ್ನೆಯೇ ಬಿಗ್ ಬಾಸ್ ವೇದಿಕೆಗೆ ಬರಬೇಕಿತ್ತು. ಸ್ಪರ್ಧಿಯಾಗಿ ಜಾಯಿನ್ ಆಗಿದ್ದಕ್ಕೆ ಬಹಳ ಸಂತೋಷವಾಯಿತು” ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
“ಅನಾಥ ಮಕ್ಕಳ ಏಳಿಗೆಗಾಗಿ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಬಿಗ್ ಬಾಸ್ನಿಂದ ಬಂದ ಹಣವನ್ನು ಅಪ್ಪ-ಅಮ್ಮ ಇಲ್ಲದ ಮಕ್ಕಳಿಗೆ ನೀಡಲು ಅವರು ನಿರ್ಧರಿಸಿದ್ದಾರೆ” ಎಂದು ಪ್ರದೀಪ್ ಈಶ್ವರ್ ಆಪ್ತರು ಮಾಹಿತಿ ನೀಡಿದ್ದಾರೆ. ಸದ್ಯ ಶಾಸಕರು ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.