ಆನೇಕಲ್: ಅತ್ತಿಬೆಲೆ ಗಡಿಯ ಬಾಲಾಜಿ ಕ್ರ್ಯಾಕರ್ಸ್ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಸಾವಿಗೀಡಾದ 12 ಜನರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ನಿನ್ನೆ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
“ಮೃತಪಟ್ಟ ಅಮಾಯಕ ಯುವಕರನ್ನು ಕಂಡರೆ ದುಃಖ ಉಮ್ಮಳಿಸಿ ಬರುತ್ತಿದೆ. 19 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ. 12 ಮಂದಿ ಸಜೀವ ದಹನವಾಗಿದ್ದಾರೆ. ಪಟಾಕಿ ದಾಸ್ತಾನಿಟ್ಟುಕೊಳ್ಳಲು ಪರವಾನಗಿ ನೀಡಿರಲಿಲ್ಲ. ಮಾರಾಟದ ಅಂಗಡಿಗೆ ಮಾತ್ರ ಅನುಮತಿ ಪಡೆಯಲಾಗಿತ್ತು. ಅಧಿಕಾರಿಗಳ ಕಣ್ಣು ತಪ್ಪಿಸಿ ಅಕ್ರಮ ದಾಸ್ತಾನಿಟ್ಟಿರುವುದೇ ಘಟನೆಗೆ ಕಾರಣ” ಎಂದರು.
“ದಾಸ್ತಾನಿಟ್ಟಿರುವ ಗೋಡೌನ್ಗೆ ಕಿರಿದಾದ ಬಾಗಿಲಿದೆ. ಇದರಲ್ಲಿ ಕಾರ್ಮಿಕರು ಸಿಲುಕಿದ್ದಾರೆ. ಘಟನೆ ನಡೆದ ಕಟ್ಟಡವನ್ನು ಕಂಡರೆ ಯಾವಾಗ ಬೀಳುತ್ತೋ ಎನ್ನುವ ಆತಂಕ ಮೂಡುತ್ತದೆ. ಕಟ್ಟಡ ರಕ್ಷಣಾ ಕಾರ್ಯಚರಣೆಯಲ್ಲಿರುವ ಅಗ್ನಿಶಾಮಕ ದಳದ ಸಿಬ್ಬಂದಿಯ ಮೇಲೆಯೇ ಬೀಳುವ ಹಾಗಿದೆ. ಹೀಗಾಗಿ ಅವರ ಕಾರ್ಯಕ್ಕೆ ಇನ್ನಷ್ಟು ಸುರಕ್ಷಿತ ಮುನ್ನೆಚ್ಚರಿಕೆ ಕ್ರಮಗಳಿಗಾಗಿ ಸೂಚಿಸಲಾಗಿದೆ. ಒಂದೇ ಅಂತಸ್ತಿನ ಕಟ್ಟಡವಾದರೂ ಸುರಕ್ಷಿತವಲ್ಲದ ದಾಸ್ತಾನು ಮಳಿಗೆ ಇದಾಗಿದೆ. ಮೃತರಲ್ಲಿ ವ್ಯಾಪಾರ ಮಾಡಲು ಬಂದವರೂ ಸೇರಿದ್ದಾರೆ” ಎಂದು ತಿಳಿಸಿದರು.
ಕಂದಾಯ, ಪೊಲೀಸ್ ಇಲಾಖೆಯ ನಿರ್ಲಕ್ಷ್ಯ- ಕೇಂದ್ರ ಸಚಿವ ಎ. ನಾರಾಯಣಸ್ವಾಮಿ: ಪಟಾಕಿ ದಾಸ್ತಾನು ಮಳಿಗೆ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಪೊಲೀಸರ ವಿರುದ್ಧ ಕಿಡಿಕಾರಿದರು. “ಅಕ್ರಮ ದಾಸ್ತಾನು ಮಳಿಗೆಗೆ ಹೊಂದಿಕೊಂಡಂತೆ ಮಾರಾಟ ಮಳಿಗೆ ಇದ್ದರೂ ಖುದ್ದು ಪರಿಶೀಲಿಸದೆ ಪರವಾನಗಿ ನೀಡಿರುವ ಕಂದಾಯ, ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಘಟನೆಗೆ ಕಾರಣ. ಕೂಡಲೇ ತನಿಖೆ ಕೈಗೊಂಡು ಕ್ರಮ ವಹಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ. “ಈ ಸಂಬಂಧ ಮುಖ್ಯಮಂತ್ರಿಯವರಲ್ಲಿಯೂ ಮಾತನಾಡುವೆ. ಘಟನೆಗೆ ನಿಖರ ಕಾರಣ ತಿಳಿದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿಸಿ, ಡಿಐಜಿ, ಎಸ್ಪಿಗೆ ತಿಳಿಸಿದ್ದೇನೆ” ಎಂದು ಹೇಳಿದರು.