Breaking News

ಬೆಳಗಾವಿಯಲ್ಲಿ ಮದ್ಯ ನಿಷೇಧಿಸಲು ಮಹಿಳೆಯರ ಆಗ್ರಹ

Spread the love

ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ.

ಸತ್ಯ, ಅಹಿಂಸಾ ತತ್ವ, ಶಾಂತಿಮಂತ್ರದಿಂದ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿರುವ ಗಾಂಧಿ ಹೋರಾಟವನ್ನು ಎಲ್ಲೆಡೆ ಗುಣಗಾನ ಮಾಡಿ ಸ್ಮರಿಸಲಾಗುತ್ತಿದೆ. ಆದರೆ, ಬಾಪೂಜಿ ಕಂಡಿದ್ದ ಸಾರಾಯಿ/ಮದ್ಯ ಮುಕ್ತ ಗ್ರಾಮಗಳ ಕನಸು ಮಾತ್ರ ಇಂದಿಗೂ ನನಸಾಗಿಲ್ಲ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿಂದು ಮಹಿಳೆಯರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಿನ್ನೆ (ಭಾನುವಾರ) ಮಧ್ಯಾಹ್ನದಿಂದ ಮದ್ಯ ನಿಷೇಧ ಆಂದೋಲನ ಕರ್ನಾಟಕ ಮತ್ತು ಗ್ರಾಮೀಣ ಕೂಲಿಕಾರರ ಸಂಘದ ಸಹಯೋಗದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಬೀರು ಬೇಡ, ನೀರು ಬೇಕು. ಸಾರಾಯಿ ಬೇಡ, ಶಿಕ್ಷಣ ಬೇಕು ಎಂಬ ಘೋಷಣೆಗಳನ್ನು ಮೊಳಗಿಸಿದ ಮಹಿಳೆಯರು, ರಾಜ್ಯದಲ್ಲಿ ಹೊಸದಾಗಿ 1 ಸಾವಿರ ಬಾರ್​ಗಳನ್ನು ತೆರೆಯಲು ಮುಂದಾಗಿರುವ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮದ್ಯ ನಿಷೇಧ ಆಂದೋಲನದ ಕಾರ್ಯಕರ್ತೆ ಅನಿತಾ ಬೆಳಗಾಂವಕರ್ ಮಾತನಾಡಿ, “ಗಾಂಧೀಜಿ ಫೋಟೋಗೆ ಪೂಜೆ ಮಾಡಿ, ಅವರ ತತ್ವಗಳ ಬಗ್ಗೆ ಭಾಷಣ ಮಾಡಿ ಹಿಂಬದಿಯಲ್ಲಿ ಬಾರ್, ಮದ್ಯದಂಗಡಿಗಳಿಗೆ ಸರ್ಕಾರ ಲೈಸನ್ಸ್ ನೀಡುತ್ತಿದೆ. ಇದು ಬಾಪೂಜಿಗೆ ಮಾಡುತ್ತಿರುವ ದೊಡ್ಡ ಅಪಮಾನ‌. ಎಲ್ಲಿಯವರೆಗೆ ಬಾರ್ ಲೈಸನ್ಸ್ ನೀಡುವುದು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಹೋರಾಟ ಮುಂದುವರೆಸುತ್ತೇವೆ. ಈ ಸರ್ಕಾರ ಜನರನ್ನು ಸರ್ವನಾಶ ಮಾಡಲು ಹೊರಟಿದೆ” ಎಂದು ಕಿಡಿಕಾರಿದರು.

ಕಾರ್ಯಕರ್ತೆ ಸುರೇಖಾ ಷಾ ಮಾತನಾಡಿ, “ಸಾರಾಯಿ ಕುಡಿತದ ಚಟಕ್ಕೆ ನನ್ನ ಗಂಡ ಬಲಿಯಾಗಿದ್ದಾರೆ. ನನ್ನ ಪರಿಸ್ಥಿತಿ ಯಾರಿಗೂ ಬರಬಾರದು. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಬೇಕಾದರೆ ವಾಪಸ್​ ಪಡೆಯಲಿ. ಆದರೆ, ಬಾರ್‌ಗಳನ್ನು ಬಂದ್ ಮಾಡಿದರೆ ಜನ ನೆಮ್ಮದಿಯಿಂದ ಬದುಕು ನಡೆಸಬಹುದು” ಎಂದರು.

ಕಾರ್ಯಕರ್ತೆ ಗೌರವ್ವ ರಾಮಗೋನಟ್ಟಿ ಮಾತನಾಡಿ, “ನನ್ನ ಗಂಡ ವಿಪರೀತ ಸಾರಾಯಿ ಕುಡಿಯುತ್ತಾನೆ. ನಾನೇ ದುಡಿದು ಐದು ಮಕ್ಕಳನ್ನು ಸಲಹುತ್ತಿದ್ದೇನೆ. ಆದರೂ, ಆತ ಸಾಲ ಮಾಡಿ ಕುಡಿದು ನಮ್ಮ ಜೀವನವನ್ನೇ ದುಸ್ತರ ಮಾಡಿದ್ದಾನೆ. ದಯವಿಟ್ಟು ಸಾರಾಯಿ ಅಂಗಡಿಗಳನ್ನು ಬಂದ್ ಮಾಡಿ ನಮ್ಮನ್ನು ಬದುಕಿಸಿ” ಎಂದು ಅಳಲು ತೋಡಿಕೊಂಡರು.

ಇದು ಸಾರಾಯಿ ಗ್ಯಾರಂಟಿ ಸರ್ಕಾರ -ಬೊಮ್ಮಾಯಿ: ಇತ್ತೀಚಿಗೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿದಿ, ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ. ಇದು ಸಾರಾಯಿ ಗ್ಯಾರಂಟಿ ಸರ್ಕಾರ. ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಸಾಮಾಜಿ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದರು.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ