Home / ಹುಬ್ಬಳ್ಳಿ / ಕರ್ನಾಟಕ ಬಂದ್​: ಹುಬ್ಬಳ್ಳಿ ಧಾರವಾಡದಲ್ಲಿ ಮಿಶ್ರ ಪ್ರತಿಕ್ರಿಯೆ… ಶಾಲಾ ಕಾಲೇಜಿಗಿಲ್ಲ ರಜೆ, ಎಂದಿನಂತೆ ಆಟೋ ಬಸ್ ಸಂಚಾರ

ಕರ್ನಾಟಕ ಬಂದ್​: ಹುಬ್ಬಳ್ಳಿ ಧಾರವಾಡದಲ್ಲಿ ಮಿಶ್ರ ಪ್ರತಿಕ್ರಿಯೆ… ಶಾಲಾ ಕಾಲೇಜಿಗಿಲ್ಲ ರಜೆ, ಎಂದಿನಂತೆ ಆಟೋ ಬಸ್ ಸಂಚಾರ

Spread the love

ಹುಬ್ಬಳ್ಳಿ-ಧಾರವಾಡ/ಹಾವೇರಿ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವದನ್ನು ಖಂಡಿಸಿ ಕರ್ನಾಟಕ ಬಂದ್​​ಗೆ ಹುಬ್ಬಳ್ಳಿ, ಧಾರವಾಡ ಮತ್ತು ಹಾವೇರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹುಬ್ಬಳ್ಳಿಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಮಹದಾಯಿ ಹೋರಾಟಗಾರರು ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿಯ ಹೊಸೂರ ವೃತ್ತದಲ್ಲಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಸೇರಿದಂತೆ ರೈತ ಮುಖಂಡರು ಪ್ರತಿಭಟನೆ ನಡೆಸಿದರು. ಕಾವೇರಿ ನಮ್ಮದು, ಕಾವೇರಿ ಹೋರಾಟಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆದರೇ ಆಟೋ ಸಂಚಾರ, ಬಸ್ ಸಂಚಾರ ಯಥಾಸ್ಥಿತಿ ಇದೆ. ಶಾಲಾ ಕಾಲೇಜು, ಸರ್ಕಾರಿ ಇಲಾಖೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಕೇವಲ ಸಾಂಕೇತಿಕವಾಗಿ ಪ್ರತಿಭಟನೆ ನಡೆಯಲಿದೆ. ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಬೆಂಬಲ ನೀಡಿದ್ದರಿಂದ ಚೆನ್ನಮ್ಮ‌ ವೃತ್ತ, ಹೊಸೂರು ವೃತ್ತ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆದು ವಿವಿಧ ಪ್ರದೇಶಗಳಲ್ಲಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಧಾರವಾಡದಲ್ಲೂ ಹೋರಾಟ: ಧಾರವಾಡದಲ್ಲಿಕಾವೇರಿಗಾಗಿ ಕರ್ನಾಟಕ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದ 20ಕ್ಕೂ ಹೆಚ್ಚು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿಯ ಜುಬಲಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ರಸ್ತೆ ತಡೆ ಕೈಬೀಡುವಂತೆ ಪೊಲೀಸರು ಕೋರಿದರೂ ಒಪ್ಪದ ಹೋರಾಟಗಾರರು ಪ್ರತಿಭಟನೆ ಮುಂದುವರೆಸಿದರು. ಈ ಹಿನ್ನೆಲೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.

ಬಂದ್ ಬೆಂಬಲಿಸಿ ರೈತನೋರ್ವ ಏಕಾಂಕಿಯಾಗಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಹಳಿಯಾಳ ದಾಂಡೇಲಿ ಕಡೆಯಿಂದ ಬರುತ್ತಿದ್ದ ಬಸ್​ಅನ್ನು ರೈತ ಮುಖಂಡ ನಿಂಗಪ್ಪ ದಿವಟಗಿ ತಡೆದಿದ್ದಾರೆ. ಇನ್ನೂ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸುಧೀರ ಮುಧೋಳ ರಕ್ತದಲ್ಲಿ ಕಾವೇರಿ ನಮ್ಮದು ಎಂಬ ಬರಹ ಬರೆದರು. ಬಳಿಕ ಉರುಳು ಸೇವೆ ಮಾಡಿ ಕಾವೇರಿಗಾಗಿ ಪ್ರತಿಭಟಿಸಿದರು.

ಹಾವೇರಿಯಲ್ಲಿ ಕರವೇ ಗಜಸೇನೆ ಸಂಘಟನೆ ಪ್ರತಿಭಟನೆ ‌ನಡೆಸಿತು. ಸಂಘಟನೆ ಸದಸ್ಯರು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬಸ್ ತಡೆದು ಪ್ರತಿಭಟಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನಮ್ಮದು, ನೀರು ಹರಿಸುವುದು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸಿಎಂ ಸಿದ್ದರಾಮಯ್ಯ ಹಾಗೂ ತಮಿಳುನಾಡಿನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

‘ಬರ ಪರಿಹಾರ ನೀಡದೇ ಕಾಂಗ್ರೆಸ್ ದಿವಾಳಿ’

Spread the loveಹುಬ್ಬಳ್ಳಿ: ‘ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಯಾವತ್ತು ಹೇಳಿಲ್ಲ. ಕೇಂದ್ರ ಸರ್ಕಾರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ