ಬೆಂಗಳೂರು : ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ಯ ಅಂಗವಾಗಿ ಇಂದು ಬೆಳಗ್ಗೆ 10:00 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ, ಬಾಂಕ್ವೆಟ್ ಹಾಲ್‌ನಲ್ಲಿ ಭಾರತ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತ ಸಂವಿಧಾನದ ಪೀಠಿಕೆಯನ್ನು ಏಕಕಾಲದಲ್ಲಿ ಓದುವ ಕಾರ್ಯಕ್ರಮದಲ್ಲಿ ಅಧಿಕಾರಿ, ಸಿಬ್ಬಂದಿ ಹಾಜರಾಗಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಬಾಂಕ್ವೆಟ್ ಹಾಲ್‌ನಲ್ಲಿ ಭಾರತ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ನಡೆಯಲಿದೆ. ಪೀಠಿಕೆಯನ್ನು ಏಕಕಾಲದಲ್ಲಿ ಓದುವ ಕಾರ್ಯಕ್ರಮದಲ್ಲಿ ಸಚಿವಾಲಯದ ಅಧಿಕಾರಿ, ಸಿಬ್ಬಂದಿ ವರ್ಗದವರು ಇಂದು ಬೆಳಗ್ಗೆ 9.45 ಗಂಟೆಗೆ ಬಾಂಕ್ವೆಟ್ ಹಾಲ್‌ನಲ್ಲಿ ತಪ್ಪದೇ ಹಾಜರಿರುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಿಧಾನಸೌಧದಲ್ಲಿ ಮೊನ್ನೆಯ ದಿನ ಸುದ್ದಿಗೋಷ್ಠಿ ನಡೆದಿದ್ದು, ಆ ವೇಳೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹದೇವಪ್ಪ ಈ ಕಾರ್ಯಕ್ರಮ ಮತ್ತು ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಿದ್ದರು. ‘ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಹಾಗಾಗಿ ಇದು ಉಪಯೋಗವಾಗಲಿದೆ. ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವಿಕೆ, ಮಕ್ಕಳಲ್ಲಿ ಸಂವಿಧಾನದ ಉದ್ದೇಶ ಅರ್ಥ ಆಗಬೇಕು. ಹಾಗಾಗಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ’ ಎಂದಿದ್ದರು.
ಮೂಲಭೂತ ಹಕ್ಕುಗಳು ಎಲ್ಲರಿಗೂ ಗೊತ್ತಿದೆ. ಆದರೆ ಕರ್ತವ್ಯಗಳನ್ನು ಯಾರು ಪಾಲಿಸುತ್ತಿಲ್ಲ. ಹಾಗಾಗಿಯೇ ಈ ಕಾರ್ಯಕ್ರಮ ತಂದಿದ್ದೇವೆ. ಆನ್ಲೈನ್ ಮೂಲಕ ರಿಜಿಸ್ಟ್ರೇಷನ್ ಆಗಿದೆ. ಸುಮಾರು ಎರಡು ಕೋಟಿ ಜನ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇದು ಒಂದು ದೊಡ್ಡ ಆಂದೋಲನವಾಗಬೇಕು. ಎಲ್ಲ ಕಡೆಯೂ ಬಳಸಬೇಕು ಎಂದು ಹೇಳಿದ್ದರು.