ಬೆಂಗಳೂರು: ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಅಧಿಕಾರಿಗಳು ಮನೆಯಿಂದ ಕೆಲಸ ಮಾಡಬಾರದು.
ಕಚೇರಿಯಲ್ಲೇ ಕುಳಿತು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಕೇಂದ್ರಸ್ಥಾನದಲ್ಲಿಯೇ ವಾಸವಿದ್ದು, ಜನರ ಸೇವೆಗೆ ಲಭ್ಯರಿರಬೇಕು. ಕಚೇರಿಯಲ್ಲಿರಬೇಕು, ಇಲ್ಲವೆ ಜಿಲ್ಲೆಯಲ್ಲಿ ಪ್ರವಾಸದಲ್ಲಿರಬೇಕು. ಮನೆಯಲ್ಲಿ ಕುಳಿತು ಕೆಲಸ ಮಾಡಬಾರದು. Work from home ಗೆ ಅವಕಾಶವಿಲ್ಲ. ಇದರಿಂದ ಜನರಿಗೆ ತೊಂದರೆಯಾಗುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹಾಗೆಯೇ ಅಧಿಕಾರಿಗಳು ದೂರವಾಣಿ ಕರೆಗೆ ಸಿಗುವುದಿಲ್ಲ ಎಂಬ ದೂರುಗಳು ಸಾರ್ವಜನಿಕರು, ಶಾಸಕರು ಮತ್ತು ಸಚಿವರಿಂದ ಬಂದಿವೆ. ಇದು ಒಳ್ಳೆಯದಲ್ಲ. ಎಲ್ಲರ ಕರೆಗಳಿಗೆ ಸ್ಪಂದಿಸಬೇಕು. ಎಲ್ಲ ಪಕ್ಷಗಳ ಶಾಸಕರಿಗೆ ಪ್ರೋಟೋಕಾಲ್ ಚಾಚೂ ತಪ್ಪದೆ ಪಾಲಿಸಬೇಕು. ಅಧಿಕಾರಿಗಳಿಗೆ ಹೃದಯ ಸರಿಯಾಗಿ ಕೆಲಸ ಮಾಡಬೇಕು. ಮನುಷ್ಯತ್ವ ಇಲ್ಲದವರು ಸಾರ್ವಜನಿಕ ಸೇವೆಗೆ ಬರಬಾರದು. ನಿಮ್ಮ ನಿರ್ಲಕ್ಷ್ಯ ಮತ್ತು ಉಡಾಫೆತನದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.