Breaking News

ಒಂದು ದೇಶ ಒಂದೇ ಚುನಾವಣೆ ಸಮಿತಿಗೆ 8 ಮಂದಿ ಸದಸ್ಯರ ನೇಮಕ

Spread the love

ನವದೆಹಲಿ: ‘ಒಂದು ದೇಶ ಒಂದೇ ಚುನಾವಣೆ’ಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ಇದೀಗ ಸಮಿತಿಗೆ ಎಂಟು ಜನ ಸದಸ್ಯರನ್ನು ನೇಮಿಸಿ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಆಡಳಿತ, ವಿರೋಧ ಪಕ್ಷಗಳ ನಾಯಕರ ಜತೆಗೆ ರಾಜಕಾರಣಿಗಳು, ಕಾನೂನು, ಆರ್ಥಿಕ ತಜ್ಞರಿಗೂ ಅವಕಾಶ ಕಲ್ಪಿಸಲಾಗಿದೆ. ಅವಧಿಗೂ ಮೊದಲೇ ಸಂಸತ್​ ಚುನಾವಣೆ ನಡೆಯಲಿದೆ ಎಂಬ ಊಹಾಪೋಹಗಳ ನಡುವೆಯೇ ಕೇಂದ್ರದ ಈ ನಡೆ ಮತ್ತಷ್ಟು ಕುತೂಹಲ ಮೂಡಿಸಿದೆ.

8 ಸದಸ್ಯರ ಈ ಸಮಿತಿಗೆ ಅಧ್ಯಕ್ಷರಾಗಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ನೇಮಿಸಲಾಗಿದೆ. ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, 15ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ. ಸಿಂಗ್, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಸುಭಾಷ್ ಸಿ. ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ, ಮಾಜಿ ಮುಖ್ಯ ವಿಜಿಲೆನ್ಸ್ ಕಮಿಷನರ್ ಸಂಜಯ್ ಕೊಠಾರಿ ಇದ್ದಾರೆ.

ಒಂದು ದೇಶ, ಒಂದು ಚುನಾವಣೆ ವಿಷಯವಾಗಿ ಸಮಿತಿ ನಡೆಸುವ ಸಭೆಗಳಲ್ಲಿ ವಿಶೇಷ ಆಹ್ವಾನಿತರಾಗಿ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ನ್ಯಾಯಾಂಗ ಇಲಾಖೆಯ ಕಾರ್ಯದರ್ಶಿ ನಿತೇನ್ ಚಂದ್ರ ಅವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಸಮಿತಿಯು ತಕ್ಷಣವೇ ಕೆಲಸ ಆರಂಭಿಸಿ ಆದಷ್ಟು ಬೇಗ ಸಾಧಕ ಬಾಧಕಗಳ ಬಗ್ಗೆ ಶಿಫಾರಸು ಮಾಡಲಿದೆ. ಜನಪ್ರತಿನಿಧಿಗಳ ಕಾಯಿದೆಯ ಜೊತೆಗೆ ಇತರೆ ಯಾವ ಕಾನೂನು ಮತ್ತು ನಿಬಂಧನೆಗಳಿಗೆ ತಿದ್ದುಪಡಿ ತರಬೇಕು ಎಂಬುದನ್ನೂ ಪರಿಶೀಲಿಸಲಿದೆ. ಇದಲ್ಲದೆ, ಈ ತಿದ್ದುಪಡಿಗಳಿಗೆ ರಾಜ್ಯಗಳ ಅನುಮೋದನೆ ಅಗತ್ಯವಿದೆಯೇ ಎಂಬುದನ್ನು ಸಹ ನಿರ್ಧರಿಸುತ್ತದೆ. ಸಮಿತಿಯು ಸಂಸತ್ತು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ, ಅವಿಶ್ವಾಸ ನಿರ್ಣಯ, ಪಕ್ಷಾಂತರ ಇತ್ಯಾದಿಗಳ ಸಂದರ್ಭದಲ್ಲಿ ಅಗತ್ಯ ಪರಿಹಾರಗಳನ್ನು ಕೂಡ ಸಮಿತಿ ವಿಶ್ಲೇಷಣೆ ನಡೆಸಲಿದೆ.

ಕಾನೂನು ಆಯೋಗ ಶಿಫಾರಸು: ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯಬೇಕು ಎಂಬುದು ಸರ್ಕಾರ ಕೈಗೊಂಡ ದಿಢೀರ್​ ನಿರ್ಧಾರ ಅಲ್ಲ ಎಂಬುದನ್ನು ಅಧಿಸೂಚನೆಯಲ್ಲಿ ಹೇಳಲಾಗಿದೆ. ಭಾರತೀಯ ಕಾನೂನು ಆಯೋಗದ 170 ನೇ ವರದಿ, ಸಾರ್ವಜನಿಕ ಅರ್ಜಿಗಳು, ಕಾನೂನು ಇಲಾಖೆ, ಸಂಸದೀಯ ಸ್ಥಾಯಿ ಸಮಿತಿಯು 2015 ರ ಡಿಸೆಂಬರ್​ನಲ್ಲಿ ಸಲ್ಲಿಸಿದ 79 ನೇ ವರದಿಯಲ್ಲಿ ಒಂದು ದೇಶ, ಒಂದೇ ಚುನಾವಣೆಯ ಬಗ್ಗೆ ಶಿಫಾರಸು ಮಾಡಿದೆ ಎಂದು ಕಾನೂನು ಸಚಿವಾಲಯ ಗೆಜೆಟ್​ನಲ್ಲಿ ತಿಳಿಸಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ