ಧಾರವಾಡ: ಸುಧೀರ್ಘ 19 ವರ್ಷಗಳ ಕಾಲ ತಾಯಿ ಭಾರತಿಯ ಸೇವೆ ಸಲ್ಲಿಸಿದ ಧನ್ಯತಾ ಭಾವ.. ಸಮವಸ್ತ್ರದಲ್ಲಿ ತನ್ನ ತಂದೆಯನ್ನು ಕಂಡು ಓಡೋಡಿ ಹೋಗುತ್ತಿರುವ ಮಕ್ಕಳು.. ತನ್ನ ಸಹೋದರನನ್ನು ಕಂಡು ಆನಂದ ಭಾಷ್ಪ ಸುರಿಸಿದ ಅಣ್ಣಂದಿರು.. ಭಾರತ ಮಾತಾ ಕೀ ಜೈ ಎನ್ನುವ ಘೋಷಣೆಗಳು ಇದೆಲ್ಲ ಕಂಡು ಬಂದದ್ದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ.
19 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ತಾಯಿ ಭಾರತಿಯ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿ ಬಂದ ಯೋಧ ಈಶ್ವರ ಆಯಟ್ಟಿ ಅವರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು. ಗ್ರಾಮದ ಹಿರಿಯರೆಲ್ಲ ಈಶ್ವರ ಆಯಟ್ಟಿ ಅವರನ್ನು ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನದಿಂದ ಮೆರವಣಿಗೆ ಮಾಡುವ ಮೂಲಕ ಅದ್ಧೂರಿಯಾಗಿ ಗ್ರಾಮಕ್ಕೆ ಬರಮಾಡಿಕೊಂಡರು.
ಗ್ರಾಮದ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ ಯೋಧ ಈಶ್ವರ ಆಯಟ್ಟಿ, ಅಲ್ಲಿ ದೇವಿಗೆ ಪೂಜೆ ಸಲ್ಲಿಸಿದರು. ತಮ್ಮ ಪತ್ನಿಗೆ ಮಾಂಗಲ್ಯ ಹಾಕುವ ಮೂಲಕ ಮತ್ತೊಮ್ಮೆ ಮುತ್ತೈದೆ ಸೌಭಾಗ್ಯ ನೀಡಿದ್ದು ವಿಶೇಷವಾಗಿತ್ತು. ಅಲ್ಲಿಂದ ಬೃಹತ್ ಮೆರವಣಿಗೆ ಮೂಲಕ ಈಶ್ವರ ಆಯಟ್ಟಿ ಅವರನ್ನು ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಕರೆದುಕೊಂಡು ಬರಲಾಯಿತು. ದಾರಿಯುದ್ದಕ್ಕೂ ಯುವಕರು ಪಟಾಕಿ ಸಿಡಿಸಿ, ಪುಷ್ಪಮಳೆಗರೆದರು. ಈ ವೇಳೆ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಈಶ್ವರ ಆಯಟ್ಟಿ, 19 ವರ್ಷಗಳ ಕಾಲ ಭಾರತಮಾತೆಯ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ. ವೃತ್ತಿ ಜೀವನದ ದಿನಗಳನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ತಮ್ಮ ಕರ್ತವ್ಯದ ಸಂದರ್ಭದಲ್ಲಿನ ದಿನಗಳನ್ನು ಮೆಲಕು ಹಾಕಿದರು.