Breaking News

ದೊಡ್ಡ ಮಟ್ಟದಲ್ಲಿ ಅನಾವರಣಗೊಳ್ಳಲಿದೆ ಬಹುನಿರೀಕ್ಷಿತ ‘ಜವಾನ್’​ ಟ್ರೇಲರ್

Spread the love

ಬಹುನಿರೀಕ್ಷಿತ ‘ಜವಾನ್’ ಚಿತ್ರದ ಟ್ರೇಲರ್​ಗೆ ಮುಹೂರ್ತ ನಿಗದಿಯಾಗಿದ್ದು, ದೊಡ್ಡ ಮಟ್ಟದಲ್ಲೇ ರಿಲೀಸ್​ ಆಗಲಿದೆ. ಎಲ್ಲಿ? ಯಾವಾಗ? ತಿಳಿಯಲು ಮುಂದೆ ಓದಿ..

‘ಜವಾನ್​’.. ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಬಹುನಿರೀಕ್ಷಿತ ಚಿತ್ರ.

ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ನಟನೆಯನ್ನು ಕಣ್ತುಂಬಿಕೊಳ್ಳಲು ಸಿನಿ ಪ್ರೇಮಿಗಳು ಕಾತರರಾಗಿದ್ದಾರೆ. ‘ಪಠಾಣ್​’ ಬಳಿಕ ಈ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದ್ದು, ‘ಜವಾನ್​’ನಲ್ಲಿ ನಟ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಪ್ರಿವ್ಯೂ ಕುತೂಹಲ ಹೆಚ್ಚಿಸಿದ್ದು, ಟ್ರೇಲರ್​ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಇದೀಗ ಟ್ರೇಲರ್​ ಅನಾವರಣಕ್ಕೂ ಮುಹೂರ್ತ ನಿಗದಿಯಾಗಿದ್ದು, ದೊಡ್ಡ ಮಟ್ಟದಲ್ಲಿ ರಿಲೀಸ್​ ಆಗಲಿದೆ.

 

  •  

 

ಟ್ರೇಲರ್​ ಬಿಡುಗಡೆ ಎಲ್ಲಿ? ಯಾವಾಗ?: ‘ಜವಾನ್​’ ಸಿನಿಮಾದ ಟ್ರೇಲರ್​ಗಾಗಿ ಇಡೀ ವಿಶ್ವವೇ ಕಾಯುತ್ತಿದೆ. ಚಿತ್ರದ ನಿರ್ಮಾಪಕರು ಟ್ರೇಲರ್​ ಅನ್ನು ಆಗಸ್ಟ್​ 31ರಂದು ರಾತ್ರಿ 9 ಗಂಟೆಗೆ ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜ್​ ಖಲೀಫಾದ ಮೇಲೆ ಪ್ರದರ್ಶಿಸಲು ಯೋಜಿಸಿದ್ದಾರೆ. ಈ ವಿಚಾರವನ್ನು ಸ್ವತಃ ಶಾರುಖ್​ ಖಾನ್​ ಎಕ್ಸ್​ (ಹಿಂದಿನ ಟ್ವಿಟರ್​) ನಲ್ಲಿ ತಿಳಿಸಿದ್ದಾರೆ. “ನಿಮ್ಮೊಂದಿಗೆ ಜವಾನ್​ ಆಚರಿಸಲು ನಾನು ಆಗಸ್ಟ್​ 31 ರಂದು ರಾತ್ರಿ 9 ಗಂಟೆಗೆ ಬುರ್ಜ್​ ಖಲೀಫಾಗೆ ಬರುತ್ತಿದ್ದೇನೆ. ಪ್ರೀತಿಯು ಪ್ರಪಂಚದ ಅತ್ಯಂತ ಸುಂದರವಾದ ಭಾವನೆ.. ಆ ಪ್ರೀತಿಯಲ್ಲಿ ಮುಳುಗೋಣ” ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ದುಬೈನ ಪ್ರಸಿದ್ಧ ಬುರ್ಜ್​ ಖಲೀಫಾ ಕಟ್ಟಡದಲ್ಲಿ ಶಾರುಖ್​ ಖಾನ್​ ಸಿನಿಮಾದ ಟ್ರೇಲರ್​ ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ತೆರೆಕಂಡ ಪಠಾಣ್​ ಸಿನಿಮಾದ ಟ್ರೇಲರ್​ ಅಲ್ಲೇ ಪ್ರದರ್ಶನಗೊಂಡಿತ್ತು. ಆದರೆ, ಟ್ರೇಲರ್ ಬಿಡುಗಡೆಯಾದ ನಾಲ್ಕು ದಿನಗಳ ನಂತರ ಸಮಾರಂಭವನ್ನು ನಡೆಸಲಾಯಿತು. ಇದೀಗ ಪ್ರಸ್ತುತ ಜವಾನ್​ ಚಿತ್ರದ ಟ್ರೇಲರ್​ ನೇರವಾಗಿ ಬುರ್ಜ್​ ಖಲೀಫಾದಲ್ಲಿ ಬಿಡುಗಡೆಯಾಗಲಿದೆ. ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸನ್ನು ಕಂಡ ಪಠಾಣ್​ ಚಿತ್ರವನ್ನು ಜವಾನ್​ ಮೀರಿಸುವ ನಿರೀಕ್ಷೆ ಚಿತ್ರತಂಡಕ್ಕಿದೆ. ​

 

ಮುಂಗಡ ಟಿಕೆಟ್​ ಬುಕ್ಕಿಂಗ್​ಗೆ ಭರ್ಜರಿ ರೆಸ್ಪಾನ್ಸ್​: ಜವಾನ್​ ಮುಂಗಡ ಟಿಕೆಟ್​ ಬುಕಿಂಗ್​ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಅಭಿಮಾನಿಗಳು ಸಿನಿಮಾ ಕುರಿತು ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಎಸ್​ಆರ್​ಕೆ ಮುಖ್ಯಭೂಮಿಕೆಯ ಸಿನಿಮಾ ಮುಂಗಡ ಟಿಕೆಟ್‌ಗಳು ಭಾರೀ ವೇಗದಲ್ಲಿ ಮಾರಾಟವಾಗುತ್ತಿದೆ. ಇದು ನಟನ ಜನಪ್ರಿಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಿನಿಮಾ ತೆರೆಕಾಣುವ ಮೊದಲ ದಿನದ ಟಿಕೆಟ್‌ಗಳು (ಹಲವು ಚಿತ್ರಮಂದಿರಗಳ ಟಿಕೆಟ್​ಗಳು) ಕೇವಲ 15 ನಿಮಿಷಗಳಲ್ಲಿ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ.

ಜವಾನ್‌ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಎಸ್‌ಆರ್‌ಕೆ ಮುಖ್ಯಭೂಮಿಕೆಯ ಸಿನಿಮಾದಲ್ಲಿ ವಿಜಯ್ ಸೇತುಪತಿ, ನಯನತಾರಾ, ಸಾನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಬ್ಲಾಕ್​ ಬಸ್ಟರ್ ಸಿನಿಮಾ ಪಠಾಣ್​ನಲ್ಲಿ ಎಸ್​ಆರ್​ಕೆ ಜೊತೆ ನಾಯಕ ನಟಿಯಾಗಿ ಸ್ಕ್ರೀನ್​ ಶೇರ್ ಮಾಡಿರುವ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರವೇ ಪತನವಾಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟ‌ರ್ ಭವಿಷ್ಯ ನುಡಿದಿದ್ದಾರೆ.

Spread the love ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರವೇ ಪತನವಾಗುತ್ತದೆ ಎಂದು ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ