ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಮದುವೆ ಊಟ ಸವಿದು 100ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ನಡೆದಿದೆ.
ವಾಂತಿ ಭೇದಿಯಿಂದ ಬಳಲುತ್ತಿದ್ದ ಅವರನ್ನು ವಿವಿಧ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಗ್ರಾಮದಲ್ಲಿ ಸೋಮವಾರ ಪಟೇಲ್ ಬಂಧುಗಳ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ಊಟ ಮಾಡಿ ಮನೆಗೆ ವಾಪಸ್ ಆಗುತ್ತಿದ್ದಂತೆ ಹಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಇಡೀ ರಾತ್ರಿ ಪರದಾಟ ನಡೆಸಿದ ಬಳಿಕ ಸುತ್ತಮುತ್ತಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
10ಕ್ಕೂ ಹೆಚ್ಚು ವಿವಿಧ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಹಿರೇಕೋಡಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಸುಸ್ತು ಕಾಣಿಸಿಕೊಂಡವರನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮದುವೆ ಸಮಾರಂಭದಲ್ಲಿ 500ಕ್ಕೂ ಹೆಚ್ಚು ಜನ ಭಾಗಿಯಾಗಿದ್ದು, ಮಹಾರಾಷ್ಟ್ರದ ಮಿರಜ್‌ನಿಂದಲೂ ಈ ಮದುವೆಗೆ ಆಗಮಿಸಿದ್ದರು. ಅವರಲ್ಲಿ ಕೂಡಾ ವಾಂತಿ ಭೇದಿ ಕಾಣಿಸಿಕೊಂಡಿದೆ.
ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕೋಡಿಯ ತಹಶೀಲ್ದಾರ್ ಚಿದಂಬರ ಕುಲಕರ್ಣಿ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಚಿದಂಬರ ಕುಲಕರ್ಣಿ, 100ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ ಎಂಬ ಮಾಹಿತಿ ಇದೆ. 50ಕ್ಕೂ ಹೆಚ್ಚು ಜನರು ಚಿಕ್ಕೋಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ವೈದ್ಯರ ತಂಡ ಹಿರೆಕೋಡಿಯಲ್ಲಿ ಬೀಡುಬಿಟ್ಟಿದ್ದು ತಪಾಸಣೆ ನಡೆಸುತ್ತಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಐಎಂಐ ಸಂಘಟನೆಯವರ ಜೊತೆಗೆ ಮಾತುಕತೆ ಕೂಡ ನಡೆಸಲಾಗಿದೆ. ಒಂದು ವೇಳೆ, ಸರ್ಕಾರಿ ಆಸ್ಪತ್ರೆ ಭರ್ತಿಯಾದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಅದೃಷ್ಟವಶಾತ್ ಇದುವರೆಗೂ ಯಾವುದೇ ಜೀವಹಾನಿ ಸಂಭವಿಸಿಲ್ಲ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಕೆಲವರಲ್ಲಿ ಆರೋಗ್ಯ ಸುಧಾರಣೆ ಕಾಣಿಸಿಕೊಂಡಿದೆ. ಎಲ್ಲ ರೀತಿಯಿಂದಲೂ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನಂತರ ತಾಲೂಕು ಆರೋಗ್ಯಾಧಿಕಾರಿ ಡಾ.ಸುಕುಮಾರ್ ಭಾಗಾಯಿ ಮಾತನಾಡಿ, ಮದುವೆ ಮನೆಯಲ್ಲಿ ಊಟ ಮಾಡಿದ ಬಳಿಕ ಹಲವರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಕೆಲವರು ಅಸ್ವಸ್ಥರಾಗಿದ್ದಾರೆ. ಮಾಹಿತಿ ಗೊತ್ತಾಗುತ್ತಿದ್ದಂತೆ ತಕ್ಷಣ ಐವರು ವೈದ್ಯರು, 15 ವೈದ್ಯಕೀಯ ಸಿಬ್ಬಂದಿ ಗ್ರಾಮಕ್ಕೆ ತೆರಳಿದ್ದಾರೆ. ಸದ್ಯ ವೈದ್ಯರ ತಂಡ ತಪಾಸಣೆ ನಡೆಸಿದೆ.
ಮದುವೆ ಸಮಾರಂಭದಲ್ಲಿ ನೀಡಿದ ಆಹಾರದ ಮಾದರಿಯನ್ನು ಸಂಗ್ರಹ ಮಾಡಲಾಗಿದ್ದು ಅದನ್ನ ಪರೀಕ್ಷೆಗೊಳಪಡಿಸಲಾಗುತ್ತದೆ. ಯಾವುದೇ ರೋಗಿಗಳಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಯಾರಾದರೂ ದಾಖಲಾಗಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಗ್ರಾಮದಲ್ಲಿ ಮೆಡಿಕಲ್ ಕ್ಯಾಂಪ್ ಮಾಡಿ ಆರೋಗ್ಯ ತಪಾಸಣೆ ಮಾಡುತ್ತಿದ್ದೇವೆ. ಹೆಚ್ಚಿನ ಸಮಸ್ಯೆ ಕಾಣಿಸಿಕೊಂಡರೆ ಅಂತವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ.