ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೊಡೆತಟ್ಟಿ 28 ವಿಪಕ್ಷಗಳು ರೂಪಿಸಿಕೊಂಡಿರುವ I.N.D.I.A ಮೈತ್ರಿಕೂಟದ ಮೂರನೇ ಸಭೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ನಡೆಯಲಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಒಂದು ದಿನ ಮುಂಚೆ ಅಂದರೆ ಆಗಸ್ಟ್ 30 ರಂದು ಮಹಾರಾಷ್ಟ್ರಕ್ಕೆ ಆಗಮಿಸಲಿದ್ದಾರೆ.
ಅಂದು ಬಾಲಿವುಡ್ನ ಖ್ಯಾತ ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದ್ದು, ರಕ್ಷಾ ಬಂಧನ್ ಹಿನ್ನೆಲೆ ರಾಕಿ ಕಟ್ಟಲಿದ್ದಾರೆ. ಬಳಿಕ ಅವರು ಇಂಡಿಯಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬೈ ನಿಲ್ದಾಣಕ್ಕೆ ಬಂದಿಳಿದ ಬಳಿಕ ಅವರು ನೇರವಾಗಿ ಜುಹುನಲ್ಲಿರುವ ಬಿಗ್ಬಿ ನಿವಾಸಕ್ಕೆ ತೆರಳಿ ಈ ಹಿಂದಿನಂತೆ ಅವರಿಗೆ ರಕ್ಷಾಬಂಧನ್ ಹಿನ್ನೆಲೆ ರಾಕಿ ಕಟ್ಟಲಿದ್ದಾರೆ. ಬಳಿಕ ಆಗಸ್ಟ್ 31 ರಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಆಯೋಜಿಸಿರುವ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಅದಾದ ಬಳಿಕ ಸೆಪ್ಟೆಂಬರ್ 1 ರಂದು ನಡೆಯುವ ಇಂಡಿಯಾ ಸಭೆಯಲ್ಲಿ ಭಾಗಿಯಾಗಿ ಅಂದು ಸಂಜೆ ಕೋಲ್ಕತ್ತಾಗೆ ವಾಪಸ್ ಆಗಲಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಇಂಡಿಯಾ ಸಭೆಗೆ ಬರ್ತಾರಾ ಬಿಗ್ಬಿ: ಮುಂದಿನ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸಿರುವ ಇಂಡಿಯಾ ಮೈತ್ರಿಕೂಟ ದೇಶದ ಗಣ್ಯರನ್ನು ಸೆಳೆಯುತ್ತಿದ್ದು, ಬಾಲಿವುಡ್ ಸೂಪರ್ಸ್ಟಾರ್ ಬಿಗ್ಬಿ ಅವರ ಬೆಂಬಲವನ್ನೂ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಮುಂಬೈನಲ್ಲಿ ನಡೆಯುವ ಸಭೆಗೂ ಮುನ್ನ ಬಿಗ್ಬಿ ಅವರನ್ನು ಭೇಟಿಯಾಗುತ್ತಿರುವ ಮಮತಾ ಬ್ಯಾನರ್ಜಿ ಅವರು ಬೆಂಬಲ ಕೋರಲಿದ್ದಾರೆ ಎಂದು ತಿಳಿದು ಬಂದಿದೆ.
ನನಗೆ ಯಾವ ಹುದ್ದೆಯ ಆಸೆ ಇಲ್ಲ: ಇಂಡಿಯಾ ಕೂಟದ ಮೊದಲ ಸಭೆಯನ್ನು ಪಾಟ್ನಾದಲ್ಲಿ ಆಯೋಜಿಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಸಂಚಾಲಕ ಹುದ್ದೆ ಸಿಗುವ ಸುದ್ದಿ ಹರಿದಾಡುತ್ತಿದೆ. ಪಾಟ್ನಾದಲ್ಲಿ ಇಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿತೀಶ್ಕುಮಾರ್, ನನಗೆ ಅಂತಹ ಯಾವುದೇ ಹುದ್ದೆಯ ಆಸೆಯೂ ಇಲ್ಲ. ಈ ಬಗ್ಗೆ ನನಗೆ ಯಾರೂ ಮಾಹಿತಿಯನ್ನೂ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಮುಂಬೈನಲ್ಲಿ ನಡೆಯಲಿರುವ ಭಾರತ ಮೈತ್ರಿಕೂಟದ ಸಭೆಗೆ ಮುನ್ನ ಇಂತಹ ಚರ್ಚೆಗಳು ನಡೆಯುತ್ತಿವೆ. ಕೂಟದ ಸಂಚಾಲಕನ ಹುದ್ದೆ ನೀಡಲಾಗುತ್ತದೆಯಾ ಎಂಬ ಪ್ರಶ್ನೆ ಕೇಳಿದಾಗ, ನಾನು ಏನೂ ಆಗಲು ಬಯಸುವುದಿಲ್ಲ. ನಾನು ನಿಮಗೆ ಮತ್ತೆ ಮತ್ತೆ ಹೇಳುತ್ತಿದ್ದೇನೆ. ನನಗೆ ಅಂತಹ ಯಾವುದೇ ಆಸೆಯೂ ಇಲ್ಲ. ನಾನು ಎಲ್ಲ ನಾಯಕರನ್ನು ಒಗ್ಗೂಡಿಸಲು ಮಾತ್ರ ಬಯಸುತ್ತೇನೆ ಎಂದು ನಿತೀಶ್ ಕುಮಾರ್ ತಿಳಿಸಿದರು.