ಬೆಂಗಳೂರು: ಕೋವಿಡ್ ವೇಳೆ ಔಷಧ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಆಯೋಗ ರಚನೆ ರಾಜಕೀಯ ಪ್ರೇರಿತವಾಗಿದೆ. ಈ ತನಿಖೆಗೆ ಆದೇಶ ನೀಡಿರುವುದರ ಹಿಂದೆ ದುರುದ್ದೇಶ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ಮಾಜಿ ಸಚಿವ ಡಾ. ಕೆ.ಸುಧಾಕರ್ ಆರೋಪಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ನಿರ್ವಹಣೆ ವೇಳೆ ನಡೆದಿರುವ ಔಷಧ, ಪರಿಕರ ಇತ್ಯಾದಿ ಖರೀದಿ, ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವಿನ ಕುರಿತು ತನಿಖೆಗೆ ನಿವೃತ್ತ ನ್ಯಾಯಾಧೀಶರ ಆಯೋಗ ರಚನೆ ಮಾಡಿದ್ದಾರೆ. ಆದರೆ ಕೊರೊನಾ ನಿಯಂತ್ರಣ ಮಾಡುವಲ್ಲಿ ಹಿಂದಿನ ಬಿಜೆಪಿ ಸರ್ಕಾರ ಬಹಳ ಸಫಲ ಆಗಿತ್ತು. ಅದರ ವಿರುದ್ಧ ಇಂದು ಈಗಿನ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ. ಅವರ ಯಾವುದೇ ತನಿಖೆಯನ್ನು ನಾನು ಸ್ವಾಗತ ಮಾಡುತ್ತೇನೆ’ ಎಂದರು.
ಆರೋಪ ತಳ್ಳಿ ಹಾಕಿದ ಮಾಜಿ ಸಚಿವ: ಕಳೆದ ಎರಡು ಮೂರು ತಿಂಗಳಿಂದ ಇದನ್ನೇ ಹೇಳಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 2 ಅಲೆಗಳನ್ನ ಸಮರ್ಥವಾಗಿ ನಾವು ನಿಭಾಯಿಸಿದ್ದೇವೆ. ಹಾಗೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ 3ನೇ ಅಲೆಯನ್ನ ಸಮರ್ಥವಾಗಿ ಎದುರಿಸಿದ್ದೇವೆ. ನಮ್ಮ ಸರ್ಕಾರ ಇದ್ದಾಗ ಕೊರೊನಾ ನಿರ್ವಹಣೆಗೆ ಕೋವಿಡ್ ಕಾರ್ಯಪಡೆಯನ್ನು ರಚಿಸಿದೆವು. ಇದರಲ್ಲಿ ಐವರು ಮಂತ್ರಿಗಳಿದ್ದೆವು. ಅದರ ಮೇಲೆ ಮುಖ್ಯಮಂತ್ರಿಗಳು ಇದನ್ನ ನೋಡಿಕೊಳ್ಳುತ್ತಿದ್ದರು ಎಂದು ಕೋವಿಡ್ ಅವ್ಯವಹಾರ ಆರೋಪವನ್ನು ತಳ್ಳಿ ಹಾಕಿದರು.